ಲಲಿತ ಕಲೆಗಳಿಂದ ಮಕ್ಕಳ ಕೈಯಿಂದ ಮೊಬೈಲ್ ದೂರ ಮಾಡಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವುದಕ್ಕೆ ಸಾಧ್ಯವಿದೆ ಎಂದು ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ವಿ ಪಾಟೀಲ್ ಅಭಿಪ್ರಾಯಪಟ್ಟರು.
ಸಾಗರ: ಲಲಿತ ಕಲೆಗಳಿಂದ ಮಕ್ಕಳ ಕೈಯಿಂದ ಮೊಬೈಲ್ ದೂರ ಮಾಡಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವುದಕ್ಕೆ ಸಾಧ್ಯವಿದೆ ಎಂದು ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ವಿ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಅಜಿತ ಸಭಾಭವನದಲ್ಲಿ ಭಾನುವಾರ ತೇಜಸ್ವಿ ತಬಲಾ ವಿದ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ನಾದವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಕಲೆಗಳಲ್ಲಿ ಸಂಸ್ಕಾರದ ಶಕ್ತಿ ಇದೆ ಎಂದರು.ಸಂಗೀತ, ಭರತನಾಟ್ಯ, ಯಕ್ಷಗಾನ, ತಬಲ ಹೀಗೆ ಯಾವುದೇ ಕಲೆಯನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಎದ್ದು ಕಾಣುತ್ತದೆ. ಗುರು ಹಿರಿಯರನ್ನು ಗೌರವಿಸುವ ಭಾವ ಕಾಣುತ್ತದೆ. ಸಂಸ್ಕಾರ ಇಲ್ಲದೆ ಬರೀ ವಿದ್ಯೆ ಕಲಿತರೆ ಪ್ರಯೋಜನವಿಲ್ಲ. ಸಂಸ್ಕಾರ ನೀಡುವ ಇಂತಹ ಕಲೆಯಲ್ಲಿ ತೊಡಗಿಕೊಳ್ಳಬೇಕು ಎಂದರಲ್ಲದೆ ಕಲಾ ಶಾಲೆಗಳಲ್ಲಿ ಮಾತ್ರ ಇಂದಿಗೂ ಗುರುಶಿಷ್ಯ ಪರಂಪರೆಯ ಪಾವಿತ್ರ್ಯತೆ ಉಳಿದಿದೆ ಎಂದು ಹೇಳಿದರು.
ಮನೋವೈದ್ಯ ಡಾ.ವಿನಾಯಕ ಹೆಗಡೆ ಮಾತನಾಡಿ, ಸಂಗೀತ ಮನೋರೋಗಕ್ಕೂ ಮದ್ದು ಎನ್ನುವ ಸತ್ಯ ಕಂಡು ಹಿಡಿಯಲಾಗಿದೆ. ಹಾಗಾಗಿ ಕಲೆ ಎನ್ನುವುದು ಮನರಂಜನೆಗೆ ಮಾತ್ರ ಸೀಮಿತವಲ್ಲ, ಅದು ಆರೋಗ್ಯಕ್ಕೂ ಪೂರಕ ಎನ್ನುವುದನ್ನು ಮರೆಯಬಾರದು ಎಂದರು.ತೇಜಸ್ವಿ ತಬಲ ವಿದ್ಯಾಲಯದ ಪ್ರಾಧ್ಯಾಪಕಿ, ವಿದುಷಿ ಚೇತನಾ ರಾಜೀವ್ ರಾವ್ ಮಾತನಾಡಿ, ಮಕ್ಕಳಲ್ಲಿರುವ ಸುಪ್ತಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಬಲ ವಾದಕ ಪಂಡಿತ್ ಮಡಿವಾಳಯ್ಯ ಸಾಲಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎಸ್.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಲಾ ಪೋಷಕ ಜಿ.ಆರ್.ಪಂಡಿತ್ ಉಪಸ್ಥಿತರಿದ್ದರು.ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ವಾದನ, ಡಾ.ಕಿಶನ್ ಭಾಗವತ್ ಅವರಿಂದ ತಬಲಾ ಸೋಲೋ ಮತ್ತು ವಿ.ಅಕ್ಷರ ಇಂದ್ರ, ಮೇಘಾ ಆರ್ ರಾವ್, ಶ್ವೇತಾರಾವ್, ಶ್ರೀರಾಮ ಮತ್ತವರ ತಂಡದಿಂದ ತಬಲಾ ವಾದನ ಕಾರ್ಯಕ್ರಮ ಜರುಗಿತು. ಅಲ್ಲದೆ ಖ್ಯಾತ ಗಾಯಕ ಎಂ.ಪಿ. ಹೆಗಡೆಯವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಡೆಯಿತು.