ನಮ್ಮ ಭಾರತೀಯ ಮೌಲ್ಯ, ಸಂಸ್ಕೃತಿ, ಪರಂಪರೆಯನ್ನು ಋಷಿಮುನಿಗಳು ನೀಡಿದ್ದಾರೆ. ಪ್ರಕೃತಿಯಂತೆ ನಡೆದುಬಂದ ಪರಂಪರೆ, ಸನಾತನ ಮೂಲದವರನ್ನು ನಾವಿಂದು ಮರೆಯುತ್ತಿದ್ದೇವೆ. ನಮ್ಮ ಋಷಿಗಳಂತೆ ಶಾಸ್ತ್ರ ಮತ್ತು ಶಸ್ತ್ರವನ್ನು ಇಟ್ಟುಕೊಳ್ಳಬೇಕು.
ಯಲ್ಲಾಪುರ: ಭಾರತೀಯ ಸಂಸ್ಕೃತಿ ಆಳವಾದದ್ದು. ಅದನ್ನು ಸಂಪೂರ್ಣವಾಗಿ ತಿಳಿಯುವುದು ಅಸಾಧ್ಯ. ಅದರಲ್ಲೇ ಧರ್ಮ ಅಡಗಿದೆ. ತನ್ಮೂಲಕ ಭಗವಂತನನ್ನು ಕಾಣಬಹುದು. ಅಂತಹ ದೇವಪೂಜಾ ಪದ್ಧತಿ ಜಗತ್ತಿನಲ್ಲೆಲ್ಲಿಯೂ ಇಲ್ಲ. ನಮ್ಮ ಸಂಸ್ಕೃತಿಯಲ್ಲಿ ಯಂತ್ರ, ಕಲ್ಲು, ಮಣ್ಣು, ವೃಕ್ಷ, ಮಗುವಿನಿಂದ ಹಿಡಿದು ಎಲ್ಲದರಲ್ಲೂ ದೇವರನ್ನು ಕಾಣುತ್ತೇವೆ. ಅದೇ ನಮ್ಮ ಪರಂಪರೆಯ ವಿಶೇಷ ಶಕ್ತಿ ಎಂದು ಧಾರವಾಡ ದ್ವಾರಾಪುರ ಸಂಸ್ಥಾನದ ಪರಮಾತ್ಮಾಜೀ ಮಹಾರಾಜ್ ನುಡಿದರು.
ಶುಕ್ರವಾರ ಪಟ್ಟಣದ ಶಕ್ತಿಗಣಪತಿ ದೇವಸ್ಥಾನದಲ್ಲಿ ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಮಂಡಳದ ಆಶ್ರಯದಲ್ಲಿ ೧೫ ದಿನಗಳ ಕಾರ್ತಿಕೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ನಮ್ಮ ಭಾರತೀಯ ಮೌಲ್ಯ, ಸಂಸ್ಕೃತಿ, ಪರಂಪರೆಯನ್ನು ಋಷಿಮುನಿಗಳು ನೀಡಿದ್ದಾರೆ. ಪ್ರಕೃತಿಯಂತೆ ನಡೆದುಬಂದ ಪರಂಪರೆ, ಸನಾತನ ಮೂಲದವರನ್ನು ನಾವಿಂದು ಮರೆಯುತ್ತಿದ್ದೇವೆ. ನಮ್ಮ ಋಷಿಗಳಂತೆ ಶಾಸ್ತ್ರ ಮತ್ತು ಶಸ್ತ್ರವನ್ನು ಇಟ್ಟುಕೊಳ್ಳಬೇಕು. ಧರ್ಮವೇ ದೇವರು ಎಂದರು.
ನ್ಯಾಯವಾದಿ ಜಿ.ಎಸ್. ಭಟ್ಟ ಹಳವಳ್ಳಿ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಆರಾಧನಾ ಪದ್ಧತಿಯಿದೆ. ಅದಕ್ಕಾಗಿಯೇ ನಮ್ಮ ಹಿರಿಯರು ಪ್ರತಿ ಊರಲ್ಲೊಂದು ಮಂದಿರ ನಿರ್ಮಿಸಿದ್ದಾರೆ. ಅದು ನಮ್ಮ ಪರಂಪರೆಯ ಶ್ರದ್ಧಾ ಕೇಂದ್ರವಾಗಿದೆ. ಆ ನೆಲೆಯಲ್ಲಿ ೧೫ ದಿನಗಳ ಕಾಲ ಶಕ್ತಿಗಣಪತಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಸಾಂಸ್ಕೃತಿಕ ಪ್ರವಚನಗಳು ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.ವಿ. ಹಿರಣ್ಯ ವೆಂಕಟೇಶ ಭಟ್ಟ ಅವರು ಉಪನ್ಯಾಸ ನೀಡಿದರು. ಹಿರಿಯರಾದ ಎಂ.ಎಲ್. ಹೆಗಡೆ ಯಲ್ಲಾರಗದ್ದೆ, ಜಿ.ಎನ್. ಭಟ್ಟ ತಟ್ಟಿಗದ್ದೆ ಉಪಸ್ಥಿತರಿದ್ದರು. ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ದಂಪತಿಗಳು ಶ್ರೀಗಳಿಗೆ ಫಲ ಸಮರ್ಪಿಸಿದರು. ಸಿ.ಎಸ್. ಹೆಗಡೆ ಸ್ವಾಗತಿಸಿದರು. ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವಹಿಸಿ, ವಂದಿಸಿದರು.