ಭಾರತೀಯ ಸಂಸ್ಕೃತಿಃ ಜೆಎಸ್ಎಸ್‌ ಮೊದಲ ಪಿಯು, ಪದವಿ ತರಗತಿಗಳಿಗೆ ಒಂದು ಪಠ್ಯ: ಬಿ.ನಿರಂಜನಮೂರ್ತಿ

| Published : May 13 2025, 01:34 AM IST

ಭಾರತೀಯ ಸಂಸ್ಕೃತಿಃ ಜೆಎಸ್ಎಸ್‌ ಮೊದಲ ಪಿಯು, ಪದವಿ ತರಗತಿಗಳಿಗೆ ಒಂದು ಪಠ್ಯ: ಬಿ.ನಿರಂಜನಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಭಾರತೀಯ ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಅತ್ಯಂತ ಶ್ರೀಮಂತವಾದುದು. ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ. ಆದ್ದರಿಂದಲೇ ಈ ಪಠ್ಯವನ್ನು ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂಬ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶಯದಂತೆ ಜೆಎಸ್ಎಸ್‌ ಮಹಾವಿದ್ಯಾಪೀಠ ಅಧೀನದ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಪಠ್ಯ ಅಳವಡಿಸಲಾಗಿದೆ ಎಂದು ಸಂಸ್ಥೆಯ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಹೇಳಿದರು.

ಸರಸ್ವತಿಪುರಂ ಜೆಎಸ್ಎಸ್‌ ಮಹಿಳಾ ಕಾಲೇಜಿನಲ್ಲಿ ಸೋಮವಾರ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಪ್ರಸ್ತುತ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಹೀಗಾಗಿ ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಈ ಪಠ್ಯ ಅಳವಡಿಸಲಾಗಿದೆ ಎಂದರು.

ಮೊದಲ ಪಿಯು ಹಾಗೂ ಮೊದಲ ಪದವಿ ವಿದ್ಯಾರ್ಥಿಗಳಿಗೆ ಈ ಪಠ್ಯ ಕಡ್ಡಾಯ. ಪರೀಕ್ಷೆ ನಡೆಸಿ, ಸರ್ಟಿಫಿಕೇಟ್‌ ಕೂಡ ನೀಡಲಾಗುತ್ತದೆ. ಆದರೆ ಇದು ಅಂಕಪಟ್ಟಿಯಲ್ಲಿ ಇರುವುದಿಲ್ಲ ಎಂದರು.

ಭಾರತೀಯ ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಅತ್ಯಂತ ಶ್ರೀಮಂತವಾದುದು. ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ. ಆದ್ದರಿಂದಲೇ ಈ ಪಠ್ಯವನ್ನು ಅಳವಡಿಸಲಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ನಿಮಗೆ ನೀವೇ ಶಿಲ್ಪಿಗಳು. ಆದ್ದರಿಂದ ಏನೇ ಆದರೂ ನಿಮಗೆ ನೀವೇ ಕಾರಣರು. ಆದ್ದರಿಂದ ಸಾಧನೆಗೆ ಛಲ ನಿಮ್ಮಲ್ಲಿ ಬರಬೇಕು. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು.

ಸ್ವಯಂ ಉದ್ಯೋಗಿಗಳಾಗಿ ಸ್ವಂತ ಕಾಲ ಮೇಲೆ ನಿಂತು ಇತರರಿಗೆ ಕೆಲಸ ನೀಡಿ. ಯಾವುದೋ ಒಂದು ಕೆಲಸಕ್ಕೆ ಸೇರಿ ಅದೇ ಕೆಲಸದಲ್ಲಿ ನಿವೃತ್ತಿಯಾಗಬೇಡಿ. ಅದನ್ನು ಮೀರಿ ಬೆಳೆಯಿರಿ. ಈ ರೀತಿಯಾಗಬೇಕಾದರೆ ದೊಡ್ಡ ದೊಡ್ಡ ಕನಸು ಕಾಣಿ, ನನಸು ಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಕರೆ ನೀಡಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಸಮಾರೋಪ ಭಾಷಣ ಮಾಡಿ. ವಿದ್ಯೆಯ ಜೊತೆಗೆ ಕೌಶಲ್ಯ ಕೂಡ ಮುಖ್ಯ. ಇವೆರಡೂ ಇದ್ದಲ್ಲಿ ಉದ್ಯೋಗ ಸುಲಭವಾಗಿ ಸಿಗುತ್ತದೆ ಎಂದರು.

ಯಾವುದೇ ವ್ಯಕ್ತಿಯ ವಿಕಸನಕ್ಕೆ ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಂಸ್ದೃತಿ, ಕ್ರೀಡೆ, ಎನ್ಎಸ್ಎಸ್, ಎನ್‌ಸಿಸಿ- ಹೀಗೆ ಎಲ್ಲಾ ರೀತಿಯ ಚಟುವಟಿಕೆಗಳು ಕೂಡ ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯುವ ಉದ್ಯಮಿ ಪಲಾಶ್‌ ಬಿದ್ದಪ್ಪ ಮಾತನಾಡಿ, ವಿದ್ಯೆ ಎಂದರೇ ಪುಸ್ತಕದ ವಿಷಯಗಳು ಸಾಕಾಗುವುದಿಲ್ಲ. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಕೂಡ ಮುಖ್ಯವಾಗುತ್ತವೆ. ಶಿಸ್ತು ಕೂಡ ಇರಬೇಕಾಗುತ್ತದೆ. ಸಾಧಿಸಲು ಹೊರಟಾಗ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತವೆ. ಅದನ್ನೆಲ್ಲಾ ಎದುರಿಸಿಯೇ ಮುಂದೆ ಸಾಗಬೇಕು ಎಂದರು.

ಆತ್ಮವಿಶ್ವಾಸವನ್ನು ಯಾವತ್ತೂ ಬಿಟ್ಟುಕೊಡಬೇಡಿ ಎಂದು ಕಿವಿಮಾತು ಹೇಳಿದರು.

ಸಾಂಸ್ಕೃತಿಕ, ಸಾಹಿತ್ಯಕ ಸಂಚಾಲಕಿ ಡಿ.ಎಂ. ಉಮಾದೇವಿ, ಕ್ರೀಡಾ ಸಂಚಾಲಕ ಶಿವಕುಮರಸ್ವಾಮಿ ಇದ್ದರು. ವೈಷ್ಣವಿ ಎಸ್‌. ಕೊಣ್ಣೂರು ಮತ್ತು ತಂಡದವು ಪ್ರಾರ್ಥಿಸಿದರು. ವಿ. ವಿದ್ಯಾ ಸ್ವಾಗತಿಸಿದರು. ಎನ್‌. ಸುಶ್ಮಿತಾ ವಂದಿಸಿದರು. ಕೆ.ಎನ್‌. ವಿಜಯಲಕ್ಷ್ಮಿ ನಿರೂಪಿಸಿದರು. ಸಾಂಸ್ಕೃತಿಕ, ಸಾಹಿತ್ಯಕ ವರದಿಯನ್ನು ಎಸ್‌. ಗೌತಮಿ, ಕ್ರೀಡಾ ವರದಿಯನ್ನು ಎಂ.ಪಿ. ರಕ್ಷಿತಾ ಓದಿದರು.