ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಶಿಕ್ಷಣ ಕ್ಷೇತ್ರಕ್ಕೆ ಭಾರತೀಯ ಸಂಸ್ಕೃತಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಸಾಹಿತಿ ಹಾಗೂ ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಸಿ.ಚ.ಯತೀಶ್ವರ್ ತಿಳಿಸಿದರು. ಹೋಬಳಿ ಕೇಂದ್ರದ ಪಿ. ಎಚ್. ದೇಶಪಾಂಡೆ ಪಬ್ಲಿಕ್ ಸ್ಕೂಲ್ ನಲ್ಲಿ 15ನೇ ವರ್ಷದ ಹೊಯ್ಸಳ ಉತ್ಸವ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭರತ ಖಂಡ ವಿಶ್ವಗುರುವಾಗಿ ಜ್ಞಾನದ ಶಕ್ತಿಯ ಮೂಲಕ ಮುನ್ನಡೆಯುತ್ತಿದೆ. ರಾಮಾಯಣ ಹಾಗೂ ಮಹಾಭಾರತ ಇಡೀ ವಿಶ್ವದ ಗಮನ ಸೆಳೆದಿವೆ. ಭಾರತೀಯ ಸಂಸ್ಕೃತಿಗೆ ದಾರ್ಶನಿಕರ, ಋಷಿಮುನಿಗಳ ಕೊಡುಗೆ ಅಪಾರವಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿಸುವುದರಿಂದ ಅವರಲ್ಲಿ ಜ್ಞಾನಾರ್ಜನೆ ಹೆಚ್ಚುವುದರ ಜೊತೆಗೆ ಪ್ರಾಮಾಣಿಕ ಸಭ್ಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಕಡಿಮೆ ಹಣ ಪಡೆದು ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಕಳೆದ 15 ವರ್ಷಗಳಿಂದ ಪಿ.ಎಚ್. ದೇಶಪಾಂಡೆ ಪಬ್ಲಿಕ್ ಸ್ಕೂಲ್ ನೀಡುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ನುಗ್ಗೇಹಳ್ಳಿ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಶ್ರೀ ಸದಾಶಿವ ಸ್ವಾಮಿ ಮತ್ತು ಗುಡ್ಡದ ಜಯ ಗೊಂಡೇಶ್ವರ ಸ್ವಾಮಿ ದೇವಾಲಯಗಳಲ್ಲಿ ಹೊಯ್ಸಳರ ಕಾಲದ ವಾಸ್ತುಶಿಲ್ಪಗಳನ್ನು ಕಾಣಬಹುದು, ಗ್ರಾಮದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡಿದರೆ ಅನೇಕ ಐತಿಹಾಸಿಕ ಕಥನಗಳು ತಿಳಿಯುತ್ತವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಅವರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲಿದೆ, ಈ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು, ಮೊಬೈಲ್ ಹೆಚ್ಚು ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ, ಪೋಷಕರು ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.ಪಿ. ಎಚ್. ದೇಶಪಾಂಡೆ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಶಶಿಕಲಾ ಎನ್.ಎಲ್ ಮಂಜುನಾಥ್ ಮಾತನಾಡಿದರು. ಈ ವೇಳೆ ಶಾಲಾ ವಾರ್ಷಿಕೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡಿದ ಪೋಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ನಡೆಯಿತು.
ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಅನಿಲ್ ಕುಮಾರ್, ಇಸಿಒ ಕರಿಗೌಡ, ಶ್ರೀನಿವಾಸ್, ಬಿ ಆರ್ ಪಿ ಶ್ರೀಕಾಂತ್, ಸಿಆರ್‌ಪಿ ಮಂಜೇಗೌಡ, ಶಾಲೆಯ ನಿರ್ದೇಶಕರಾದ ಸರೋಜ ಕೆಂಪರಾಜು, ಕನಕ, ಲತಾ, ರವೀಶ್ , ಚಿನ್ಮಯ್, ಚಿರಾಗ್, ವಾಸು ತಮ್ಮಣ್ಣಗೌಡ, ಮಲ್ಲೇಶ್ ತಮ್ಮಣ್ಣಗೌಡ, ಉಷಾರಾಜು, ವಿಶ್ವಾಸ್, ನಾಗರತ್ನ, ರೋಜಾ, ರೇಷ್ಮಾ, ಮುಖ್ಯ ಶಿಕ್ಷಕ ಜೆಎಲ್ ರವಿ, ಹಾಜರಿದ್ದರು.