ಚಿಕ್ಕಮಗಳೂರುನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನಿಂದ ಭಾನುವಾರ ಸಂಜೆ ನಡೆದ ವಾರ್ಷಿಕ ಕಲಾ ಉತ್ಸವ ನೋಡುಗರ ಮನ ಸೂರೆಗೊಂಡಿತು.
- ನೋಡುಗರ ಮನ ಸೂರೆಗೊಂಡ ಕಲಾ ಉತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನಿಂದ ಭಾನುವಾರ ಸಂಜೆ ನಡೆದ ವಾರ್ಷಿಕ ಕಲಾ ಉತ್ಸವ ನೋಡುಗರ ಮನ ಸೂರೆಗೊಂಡಿತು.
ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನ ಕಲಾವಿದರು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಸಂಗೀತದ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದರು.ಸುಗಮ ಸಂಗೀತದೊಂದಿಗೆ ಉತ್ಸವಕ್ಕೆ ನಾಂದಿ ಹಾಡಿದ ಸಂಸ್ಥೆಯ ಸಂಸ್ಥಾಪಕಿ ಡಾ.ವಿದ್ಯಾಲಕ್ಷ್ಮಿ ಮತ್ತು ಗಾಯಕ ಕಿರಣ್ ತಂಡ ಪುರಂದರದಾಸರ ಗಜವದನ ಬೇಡುವೆ ಗೌರಿತನಯ ಕೃತಿಯೊಂದಿಗೆ ಗಾನಯಾನ ಆರಂಭಿಸಿ ಸಿ.ಅಶ್ವತ್ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ, ಸಂತ ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತ, ಭಕ್ತಿ ಭಂಡಾರಿ ಬಸವಣ್ಣ ನವರ ವಚನ ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರ ಮನ ಗೆದ್ದರು.ನಂತರ ಡಾ. ವಿದ್ಯಾಲಕ್ಷ್ಮಿ ಅವರ ಶಿಷ್ಯರು ಭರತನಾಟ್ಯದ ಆರಂಭಿಕ ಹಂತದ ಪಾಠಗಳನ್ನು, ನೃತ್ಯದ ವಿವಿಧ ಮುದ್ರೆ, ವಿವಿಧ ಭಂಗಿಗಳನ್ನು ನೋಡುಗರೆದುರು ಸಮರ್ಥವಾಗಿ ಪ್ರಸ್ತುತಪಡಿಸಿದರು, ಈ ವೇಳೆ ಡಾ. ವಿದ್ಯಾಲಕ್ಷ್ಮಿ ಕಂಠಸಿರಿಯಲ್ಲಿ ಮೂಡಿ ಬಂದ ನಟುವಾಂಗ, ಅವರ ಶಿಷ್ಯರಿಂದ ನಡೆದ ತಿಲ್ಲಾನ, ನೃತ್ಯಗಳು ಗಮನ ಸೆಳೆದವು.ಇದೇ ವೇಳೆ ಬೆಂಗಳೂರಿನ ನೂಪುರ ಆರ್ಟ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಖ್ಯಾತಿ ಕಲಾವಿದರಾದ ಶ್ರೀಹರಿ, ಚೇತನ, ಶ್ರೀಶ, ದೀಪಿಕಾ ಲುಂಬ ಅವರ ತಂಡದಿಂದ ನಡೆದ ಕಥಕ್ ನೃತ್ಯ ನೋಡುಗರನ್ನು ಬಾವಪರವಶಗೊಳಿಸಿತು.ಗಣೇಶ ಸ್ತುತಿಯೊಂದಿಗೆ ನೃತ್ಯ ಆರಂಭಿಸಿದ ಕಲಾವಿದರು ಕ್ರಮವಾಗಿ ನಾಗೇಂದ್ರ ಹಾರಾಯ ಮಹೇಶ್ವರಾಯ ಶಿವಾಂಜಲಿ, ರಾಧಾಕೃಷ್ಣರ ರಾಸಲೀಲೆ ನೃತ್ಯಗಳನ್ನು ತನ್ಮಯರಾಗಿ ಅಭಿನಯಿಸುವ ಮೂಲಕ ಕಲಾಮಂದಿರದಲ್ಲಿ ಭಕ್ತಿಯ ತರಂಗ ಗಳನ್ನೆಬ್ಬಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಡಿ.ಎಚ್.ನಟರಾಜ್, ಆಧುನಿಕ ಕವಿಗಳು ರಚಿಸಿರುವ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವ ಪದ್ಧತಿಯೇ ಸುಗಮ ಸಂಗೀತ. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಕಾವ್ಯಗಳನ್ನು ಹಾಡುವ ಪರಂಪರೆ ಬೆಳೆದು ಬಂದಿದೆ. ಗಮಕ ಕಲೆ ಅದಕ್ಕೊಂದು ಸಾಕ್ಷಿ. ಸುಗಮ ಸಂಗೀತಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆ ಎಂದರು.ನಮ್ಮೂರಿನವರೇ ಆದ ಡಾ.ವಿದ್ಯಾ ಲಕ್ಷ್ಮೀ 13 ವರ್ಷಗಳ ಹಿಂದೆಯೇ ರಂಗರಾಮ್‌ಆರ್ಟ್ಸ್ ಫೌಂಡೇಶನ್ ಸಂಸ್ಥೆ ಆರಂಭಿಸಿ ಶಾಸ್ತ್ರೀಯ ಕಲೆಯಾದ ಭರತನಾಟ್ಯ ಕಲಿಸುತ್ತಿರುವುದು ಅಭಿನಂದನೀಯ. ಎಂಜಿನಿಯರಿಂಗ್ ವಿದ್ಯಾರ್ಥಿಯಾದರೂ ಆಸಕ್ತಿಯಿಂದ ಭರತನಾಟ್ಯ ಕಲಿತು, ಇತರರಿಗೂ ಕಲಿಸುತ್ತಾ ಭರತನಾಟ್ಯದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.ಸಾಹಿತಿ ಡಾ.ಬೆಳವಾಡಿ ಮಂಜುನಾಥ ಮಾತನಾಡಿ, ಭಾರತೀಯ ಲಲಿತ ಕಲೆಗಳಿಗೆ ವಿಶ್ವದಲ್ಲೇ ಮಾನ್ಯತೆ ಇದೆ. ಅದರ ಪ್ರಾಚೀನತೆ ಮತ್ತು ವೈವಿಧ್ಯತೆ ವಿಶೇಷವಾದುದು. ದೇಶೀಯ ರಾಜರು ನೀಡಿದ ಪ್ರೋತ್ಸಾಹ ದೇವಾಲಯಗಳಲ್ಲಿ ಸೇವೆ ಎಂಬ ಪರಿಕಲ್ಪನೆಯಲ್ಲಿ ಬೆಳೆದು ಬಂದ ಕಲೆ. ಕೇವಲ ಮನರಂಜನೆ ಮಾಧ್ಯಮವಾಗದೆ ಶಾಸ್ತ್ರೀಯ ಪ್ರಧಾನವಾದುದು. ಗುರುವಿನ ಸಾನ್ನಿಧ್ಯದಲ್ಲಿ ನಿರಂತರ ಅಭ್ಯಾಸದಿಂದ ಮಾತ್ರ ಸಿದ್ದಿಸುವಂತ ವಿದ್ಯೆ. ಭರತನಾಟ್ಯ ದಕ್ಷಿಣ ಭಾರತದ ಪ್ರಕಾರ ವಾದರೆ, ಕಥಕ್ ಹಿಂದೂಸ್ತಾನಿ ಸಂಗೀತ ಆಧರಿಸಿದ ಉತ್ತರ ಭಾರತದ ವಿಶಿಷ್ಟ ಎಂದರು.ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಡಾ. ವಿದ್ಯಾಲಕ್ಷ್ಮಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆ ಮುಖ್ಯಸ್ಥ ಸುರೇಶ್, ಗುರುಪ್ರಸಾದ್, ಲಕ್ಷ್ಮೀಬಾಯಿ ಉಪಸ್ಥಿತರಿದ್ದರು. 19 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶ್ರೀರಂಗರಾಮ್ ಆರ್ಟ್ಸ್ ಫೌಂಡೇಶನ್ ನಿಂದ ಭಾನುವಾರ ಸಂಜೆ ನಡೆದ ವಾರ್ಷಿಕ ಕಲಾ ಉತ್ಸವ ನೋಡುಗರ ಮನ ಸೂರೆಗೊಂಡಿತು.