ಭಾರತ ಖಂಡ ಮಾನವತಾವಾದಿ ಡಾ. ಬಿ.ಆರ್‌. ಅಂಬೇಡ್ಕರ್‌

| Published : May 23 2024, 01:03 AM IST

ಸಾರಾಂಶ

ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಡಾ. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ ಭಾರತ ಕಂಡ ಅತ್ಯಂತ ಪ್ರಬುದ್ಧ ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್‌ ಅವರು ವಿಶ್ವ ಜ್ಞಾನಿಯಾಗಿದ್ದಾರೆ ಎಂದು ಚಿಗರಳ್ಳಿ ಮರುಳಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರಾನಂದ ಮಹಾಸ್ವಾಮೀಜಿ ಅವರು ಹೇಳಿದರು.

ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಸೌಲಭ್ಯಗಳಿಂದ ವಂಚಿತರಾದ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಅಂಬೇಡ್ಕರ್ ಅವರು ತಮ್ಮಜೀವನವನ್ನು ಮುಡಿಪಾಗಿಟ್ಟ ಅಖಂಡ ರಾಷ್ಟ್ರೀಯವಾದಿ ಚಿಂತಕರಾಗಿದ್ದಾರೆ. ಅವರ ವಿಚಾರಗಳು ವರ್ತಮಾನಕ್ಕೆ ಸ್ಫೂರ್ತಿಯಾಗಿವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಕಲಬುರಗಿಯ ಮಹಿಳಾ ಹೋರಾಟಗಾರರು ಹಾಗೂ ನ್ಯಾಯವಾದಿಗಳಾದ ಅಶ್ವಿನಿ ಮದನಕರ್ ಮಾತನಾಡಿ, ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ಅಂಬೇಡ್ಕರ್ ಅವರು ನಡೆಸಿದ ಅವಿರತ ಸಾಮಾಜಿಕ ಹೋರಾಟ ಅವಿಸ್ಮರಣೀಯವಾದದ್ದು, ಅವರ ದೃಷ್ಟಿಯಲ್ಲಿ ಸಾಮಾಜಿಕ ಪ್ರಗತಿಗೆ ಮಹಿಳೆ ಸಾಧಿಸಿದ ಪ್ರಗತಿಯೇ ಮಹತ್ವದ್ದಾಗಿದೆ. ಆದ್ದರಿಂದ ಮಹಿಳೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಪ್ರಾಮುಖ್ಯವಾಗಿದೆ.

ಈ ವೇಳೆ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ ಮತ್ತು ಶ್ರೀಶೈಲ ಹೊಸಮನಿ ಮಾತನಾಡಿದರು. ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಶಾಂತಪ್ಪ ಸಾಲಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾಯಪ್ಪ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೊನಯ್ಯ ಹೊಸಮನಿ, ಮಲ್ಲಪ್ಪ ಬೀರನೂರ, ನಾಗಣ್ಣ ಬಡಿಗೇರ, ಮಾನಪ್ಪ ಗಡ್ಡದ, ಶರಣಬಸಪ್ಪ ಜಕಾಪುರ, ಶರಣಪ್ಪ ಬಡಿಗೇರ, ಹೊನ್ನಪ್ಪ, ಸುಭಾಸ, ನಾಗಣ್ಣಗೌಡ, ಬಸಣ್ಣಗೌಡ, ದೇಸಾಯಿಗೌಡ, ಬಸವರಾಜ, ಅಂಬರೇಶಗೌಡ, ಮರೆಪ್ಪ ಜಾಲಿಮಂಚಿ, ಮಲ್ಲಣ್ಣಗೌಡ ಪೋಲಿಸ್ ಪಾಟೀಲ್, ಶರಣಪ್ಪ ದೊಡ್ಡಮನಿ, ಜಟ್ಟೆಪ್ಪ ಇದ್ದರು.