ಸಾರಾಂಶ
ಗದಗ: ಭಾರತದ ಸುದೀರ್ಘ ಜ್ಞಾನ ಪರಂಪರೆಯು ಪ್ರತಿ ಹಂತದಲ್ಲಿಯೂ ವಿಕಸನಗೊಳ್ಳುತ್ತಾ ಬಂದಿದೆ. ಅಂತಹ ವಿಕಾಸದ ಹಾದಿಯ ಬೆಳಕಿನ ಮೂಲದಲ್ಲಿಯೇ ವಚನಗಳು ರಚಿತಗೊಂಡಿರುವವೆಂದು ಸದಾಶಿವಾನಂದ ಸ್ವಾಮೀಜಿ ಹೇಳಿದರು.
ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗವು ಐ.ಸಿ.ಪಿ.ಆರ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಭಾರತೀಯ ಜ್ಞಾನ ಪರಂಪರೆಗೆ ವಚನ ಸಾಹಿತ್ಯದ ಕೊಡುಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನರು ತಮ್ಮ ಅನುಭವಗಳನ್ನು ಜನರಿಗಾಗಿ ರಚಿಸಿರುವ ಸಾಹಿತ್ಯವೇ ವಚನ. ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮವೇ ವಚನ. ಇವುಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿರುವುದರಿಂದ ವಚನಗಳು ಕನ್ನಡದ ವೇದ ಎಂದು ಕರೆಯಲ್ಪಡುತ್ತವೆ. ವಚನಗಳು ಸುಲಿದಿರುವ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುವಂಥವುಗಳು. ಶರಣ ಸಂಸ್ಕೃತಿ ಜಗತ್ತಿನಲ್ಲಿ ಕಂಡರಿಯದ ಅದ್ಭುತ ಸಂಸ್ಕೃತಿ. ಸಮಾಜದ ಅವಗುಣಗಳನ್ನು ತೆಗೆದು ಸಮಾಜವನ್ನು ಉದ್ಧರಿಸುವ ಶಕ್ತಿ ವಚನಗಳಿಗಿವೆ ಎಂದರು. ವಿಶೇಷ ಉಪನ್ಯಾಸ ನೀಡಿದ ಗೋವಿಂದಪ್ಪ ಗೌಡಪ್ಪಗೋಳ ಜಗತ್ತಿನ ಜ್ಞಾನ ಭಂಡಾರಕ್ಕೆ ಕನ್ನಡಿಗರು ಕೊಟ್ಟ ಕಾಣಿಕೆಯೇ ವಚನ ಸಾಹಿತ್ಯ. 12ನೇ ಶತಮಾನದಲ್ಲಿಹೊಸ ಸಮಾಜ ನಿರ್ಮಿಸುವ ಉದ್ದೇಶ ಹೊಂದಿದ ವಚನಕಾರರು, ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆಗಳು, ತಾರತಮ್ಯ ಶ್ರೇಣಿಕೃತ ಸಮಾಜ, ಶೋಷಣೆ ಎಲ್ಲದರ ವಿರುದ್ಧ ಹೋರಾಟ ಮಾಡುವ ಮೂಲಕ ಶರಣರು ತಮ್ಮ ಆದರ್ಶಗಳನ್ನು ವಚನಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎ. ಕೆ. ಮಠ ಮುಂತಾದವರು ಮಾತನಾಡಿದರು. ಡಾ. ವೀಣಾ ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಮೇಘಾ ಮುದ್ದಿ ಪ್ರಾರ್ಥಿಸಿದರು. ರಾಮಚಂದ್ರ ಪಡೇಸೂರು ನಿರೂಪಿಸಿದರು. ಚಂದಾಲಿಂಗಪ್ಪ ಹಳ್ಳಿಕೇರಿ ವಂದಿಸಿದರು. ಅಂದಯ್ಯ ಅರವಟಗಿಮಠ ಉಪಸ್ಥಿತರಿದ್ದರು.