ಸಾರಾಂಶ
ದೇವಿ ಪಾರಾಯಣ ಮಾಡುವ ಬಹುತೇಕ ಭಕ್ತರು ಸತ್ಯ ಧರ್ಮದಿಂದ ನಡೆಯಲು ಜಾಗೃತಿ ಮೂಡಿಸುತ್ತದೆ. ದುಷ್ಟ ಶಕ್ತಿಯನ್ನು ದೂರ ಸರಿಸಿ ಸತ್ಸಂಕಲ್ಪವನ್ನು ಸಿದ್ಧಿ ಮಾಡಿಕೊಳ್ಳಲು ದೈವಾರಾಧನೆ ಅಗತ್ಯವಿದೆ.
ಹಾನಗಲ್ಲ: ಆಸ್ತಿಕ ಸಂವೇದನೆಗಳನ್ನೊಳಗೊಂಡು ಭಾರತೀಯರ ಮನಸ್ಸಿನಲ್ಲಿ ದೇವಾನುದೇವತೆಗಳು ಪ್ರಕೃತಿ ಸ್ವರೂಪಿಯಾಗಿ, ದೈವ ಭಕ್ತಿಯ ಶ್ರದ್ಧೆಯನ್ನು ಸದಾ ಕಾಲಕ್ಕೂ ಒಳಗೊಂಡ ಭಕ್ತಿಯ ವೈಭವ ನಮ್ಮಲ್ಲಿದೆ ಎಂದು ಹುಬ್ಬಳ್ಳಿಯ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ನುಡಿದರು.ತಾಲೂಕಿನ ಸಾಂವಸಗಿಯಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನಿಗೆ ದೈವಾರಾಧನೆ ಬೇಕು. ರಾಮಕೃಷ್ಣ ಪರಮಹಂಸರು ಕೂಡ ಕಾಳಿಕಾ ದೇವಿಯ ಆರಾಧಕರಾಗಿದ್ದರು. ಮೈಸೂರು ಮಹಾರಾಜರು ಚಾಮುಂಡೇಶ್ವರಿ ಆರಾಧಕರಾಗಿದ್ದರು. ಭಾರತದ ದೈವಶಕ್ತಿಯ ಅನುಸರಣೆಯು ವಿದೇಶಗಳಲ್ಲಿಯೂ ಇದೆ ಎಂದರು.
ದೇವಿ ಪಾರಾಯಣ ಮಾಡುವ ಬಹುತೇಕ ಭಕ್ತರು ಸತ್ಯ ಧರ್ಮದಿಂದ ನಡೆಯಲು ಜಾಗೃತಿ ಮೂಡಿಸುತ್ತದೆ. ದುಷ್ಟ ಶಕ್ತಿಯನ್ನು ದೂರ ಸರಿಸಿ ಸತ್ಸಂಕಲ್ಪವನ್ನು ಸಿದ್ಧಿ ಮಾಡಿಕೊಳ್ಳಲು ದೈವಾರಾಧನೆ ಅಗತ್ಯವಿದೆ. ಎಲ್ಲ ಕಾಲಕ್ಕೂ ಪ್ರಕೃತಿ ಹಾಗೂ ಮನುಷ್ಯನ ನಡುವೆ ಸಂಬಂಧಗಳಿವೆ. ಅಲ್ಲದೆ ಪ್ರಕೃತಿಯಲ್ಲಿಯೇ ದೇವರನ್ನು ಕಂಡಂತಹವರು ಭಾರತೀಯರು. ನಾಡಿನ ಸುಭಿಕ್ಷೆಗಾಗಿ ದೇವಿಯ ಆರಾಧನೆ ಬಹುತೇಕ ಕಡೆ ನಡೆಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಶಿವಾಚಾರ್ಯರು, ಉತ್ಸವಗಳು ಕೇವಲ ಸಡಗರ, ಸಂಭ್ರಮಕ್ಕೆ ಸೀಮಿತವಾಗಬಾರದು. ಧರ್ಮ, ಶ್ರದ್ಧೆಗಳನ್ನು ಜಾಗೃತಗೊಳಿಸಲು ಸಹಕಾರಿಯಾಗಬೇಕು. ದೇವಾನುಗ್ರಹ ಬೇಕಾದಲ್ಲಿ ಮನುಷ್ಯನಲ್ಲಿ ಭಕ್ತಿಯೂ ಬೇಕು. ಧರ್ಮ ಸಂದೇಶಗಳನ್ನು ಪಾಲಿಸಬೇಕು. ನೀತಿ, ನಿಯಮಗಳು ಮನೆ ಮನೆಯಲ್ಲಿ ಪಾಲನೆಯಾಗಬೇಕು. ಧರ್ಮ ಕಾರ್ಯದ ಮೂಲಕ ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದರು.ಕೂಡಲದ ಗುರುಮಹೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿ, ಕಾಯಕ ಧರ್ಮದ ಮೂಲಕ ಇಡೀ ವರ್ಷವನ್ನು ಸಂತಸದೊಂದಿಗೆ ಕಟ್ಟಕೊಳ್ಳುವ ಮನುಷ್ಯನಿಗೆ ಆಗಾಗ ದೈವಾರಾಧನೆಯೂ ಬೇಕು. ದೈವೀ ಶಕ್ತಿಯನ್ನು ಆಹ್ವಾನ ಮಾಡಿಕೊಂಡು ನಮ್ಮ ಮನದಿಚ್ಛೆಗಳನ್ನು ಈಡೇರಿಸಿಕೊಳ್ಳುವ ಮನುಷ್ಯನ ಇಂಗಿತದಲ್ಲಿ ನಾಳೆಗಾಗಿ ಶುದ್ಧವಾಗಿ ಬದುಕುವ ಕನಸಿದೆ. ಅದನ್ನು ನನಸಾಗಿಸಿಕೊಳ್ಳುವ ಸಂಕಲ್ಪವೂ ಇದೆ ಎಂದರು.ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಂಗಯ್ಯಶಾಸ್ತ್ರಿ ಹಿರೇಮಠ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಶಿವರುದ್ರಪ್ಪ ಅಗಸನಹಳ್ಳಿ, ಜಾತ್ರಾ ಸಮಿತಿ ಅಧ್ಯಕ್ಷ ಜಿ.ಕೆ. ಪಾಟೀಲ, ಟಾಕನಗೌಡ ಪಾಟೀಲ, ರಾಮಯ್ಯ ಈಳಿಗೇರ, ರಾಮಣ್ಣ ಈಳಿಗೇರ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ, ಎಫ್.ಬಿ. ಈಳಿಗೇರ ವೇದಿಕೆಯಲ್ಲಿದ್ದರು.