ಈ ದೇಶದ ಪ್ರತಿಯೊಬ್ಬ ಭಾರತೀಯರಿಗೆ ದೇಶದ ಮೇಲೆ ಭಕ್ತಿ ಮೂಡಿದಾಗ ಮಾತ್ರ ನಮ್ಮ ದೇಶ ಇತರ ರಾಷ್ಟ್ರಕ್ಕಿಂತ ಬಲಿಷ್ಠಗೊಳ್ಳಲು ಸಾಧ್ಯ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಿಗೆರೆ
ಈ ದೇಶದ ಪ್ರತಿಯೊಬ್ಬ ಭಾರತೀಯರಿಗೆ ದೇಶದ ಮೇಲೆ ಭಕ್ತಿ ಮೂಡಿದಾಗ ಮಾತ್ರ ನಮ್ಮ ದೇಶ ಇತರ ರಾಷ್ಟ್ರಕ್ಕಿಂತ ಬಲಿಷ್ಠಗೊಳ್ಳಲು ಸಾಧ್ಯ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಹೇಳಿದರು.ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಂಗಳವಾರ ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಲಾಂಛನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿನ ಭ್ರಷ್ಟಾಚಾರ, ಅಧರ್ಮಿಯತೆ, ರಾಷ್ಟ್ರದ್ರೋಹ ತೋಲಗಿಸವೇಕು. ನಮ್ಮ ಜಿಲ್ಲೆ, ರಾಜ್ಯ, ದೇಶ ಯಾವ ಸ್ಥಿತಿಯಲ್ಲಿ ಸಾಗುತ್ತಿದೆ ಎಂದು ಗಮನಿಸುತ್ತಿರಬೇಕು. ಇಲ್ಲವಾದರೆ ಮತ್ತೊಂದು ಪಾಕಿಸ್ತಾನ ನಿರ್ಮಾಣಗೊಳ್ಳುವ ಅಪಾಯವಿದೆ ಎಂದರು.
ಬುದ್ದ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರೆಲ್ಲರೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದಾರೆ. ಅವರ ಆದರ್ಶ ಪಾಲನೆ ಮಾಡುವುದರಲ್ಲಿ ಎಡವುತ್ತಿದೇವೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗಣಪತಿ ಉತ್ಸವ ಕೇವಲ ಆಡಂಬರಕ್ಕೆ ಸೀಮಿತಗೊಳಿಸದೇ ಬಾಲ ಗಂಗಾಧರನಾಥ್ ತಿಲಕ್ ಅವರ ನಡೆಯಂತೆ ಸಾಗಬೇಕೆಂದು ಕಿವಿಮಾತು ಹೇಳಿದರು.ಮಾದಕ ವಸ್ತುಗಳ ಸೇವನೆಯಿಂದ ಯುವ ಜನಾಂಗ ಹಾಳಾಗುತ್ತಿದೆ. ಮಾದಕ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲು ಸರ್ಕಾರ ಕ್ರಮ ವಹಿಸಬೇಕು. ಬಾಂಗ್ಲಾ ದೇಶದವರು ಇಂದು ನಮ್ಮಲ್ಲಿ ತಳ ಊರುತ್ತಿದ್ದಾರೆ. ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಮ್ಮನ್ನ ನುಂಗುವ ಕಾಲ ದೂರವಿಲ್ಲ. 370 ವಿಧಿ ರದ್ದಾಗಿ 6 ವರ್ಷ ಕಳೆದರೂ ಇಂದಿಗೂ ಕಾಶ್ಮೀರದಲ್ಲಿ ಭಯೋತ್ಪಾಧನೆ ನಿಂತಿಲ್ಲ. ಈ ಬಗ್ಗೆ ದೇಶದ ಪ್ರತಿಯೊಬ್ಬ ಭಾರತೀಯರು ಎಚ್ಚರಗೊಳ್ಳಬೇಕಿದೆ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನನ್ನ ಧರ್ಮ ಹಿಂದೂ, ದಲಿತೆ ಮಹಿಳೆಯಾಗಿ ಹುಟ್ಟಿದ್ದು ನನ್ನ ತಪ್ಪಲ್ಲ. ಅದು ಭಗವಂತನ ಇಚ್ಚೆ. ಈಗ ನಾನು ಗಣಪತಿ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಬಂದಿದ್ದೇನೆ. ಇದು ಸಾರ್ವಜನಿಕ ಗಣಪತಿ ಉತ್ಸವವಾಗಿದ್ದರಿಂದ ತನ್ನನ್ನು ಒಂದು ಪಕ್ಷಕ್ಕೆ ಸಿಮಿತವಾಗಿ ನೋಡಬೇಡಿ. ಮುಂಬೈನ ಲಾಲ್‌ಬಾಗ್ ಕಾ ರಾಜ್ ರೀತಿಯಲ್ಲಿ ಇಲ್ಲಿಯೂ ಅದ್ದೂರಿಯಾಗಿ ಗಣಪತಿ ಉತ್ಸವ ಆಚರಿಸಲು ಮುಂದಾಗೋಣ ಎಂದು ಕರೆ ನೀಡಿದರು.ಸೇವಾ ಸಮಿತಿಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್‌ನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಈ ಬಾರಿ ವಿಭಿನ್ನ ರೀತಿಯಲ್ಲಿ ಗಣೇಶ ಉತ್ಸವ ಆಚರಿಸಲು ಮುಂದಾಗಿರುವುದು ಶ್ಲಾಘನೀಯ. ಎಲ್ಲಾ ಗ್ರಾಮಗಳಲ್ಲಿ ಗಣಪತಿ ಉತ್ಸವವನ್ನು 5 ದಿನಕ್ಕೆ ಸೀಮಿತಗೊಳಿಸಿ ಎಲ್ಲರೂ ಪಟ್ಟಣದ ಗಣಪತಿ ಉತ್ಸವದಲ್ಲಿ ಭಾಗವಹಿಸಬೇಕು. ಇದರಿಂದ ಎಲ್ಲರಲ್ಲೂ ಉತ್ತಮ ಭಾಂದವ್ಯ ಬೆಸೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಅನುಕುಮಾರ್ ವಹಿಸಿದ್ದರು. ಮುಖಂಡರಾದ ಎಂ.ಆರ್.ಜಗದಿಶ್, ಹಳಸೆ ಶಿವಣ್ಣ, ರಂಜನ್ ಅಜಿತ್ ಕುಮಾರ್, ಜವರಯ್ಯ, ಜೆ.ಎಸ್.ರಘು, ಎಚ್.ಡಿ.ರಾಮೇಗೌಡ, ವಿನೋದ್ ಕಣಚೂರು, ವಿನಯ್ ಹಳೆಕೋಟೆ, ಸುಧೀರ್, ಎಂಎಸ್.ಸುಜಿತ್, ವಕೀಲ ಸಿದ್ದಯ್ಯ, ಪಟೇಲ್ ಮಂಜು, ವಿಜಯ್ ಕುಮಾರ್ ಇದ್ದರು.