ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೀಮ್ ಕಮಿಟಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಭಾರತೀಯ ಮಲ್ಲರು ಮದಗಜಗಳಂತೆ ಸೆಣಸಾಡಿ ಭರ್ಜರಿ ಗೆಲವು ದಾಖಲಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಲೀಮ್ ಕಮಿಟಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಭಾರತೀಯ ಮಲ್ಲರು ಮದಗಜಗಳಂತೆ ಸೆಣಸಾಡಿ ಭರ್ಜರಿ ಗೆಲವು ದಾಖಲಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಹೈದರಾಬಾದ್ ಸೇರಿದಂತೆ ಇರಾನ್ ಹಾಗೂ ರಷ್ಯಾದ ಖ್ಯಾತ ಮಲ್ಲರು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೈದಾನದಲ್ಲಿ ರೋಚಕ ಸೆಣಸಾಟ ನಡೆಸಿದರು. ಮೊದಲ ಕ್ರಮಾಂಕದ ಪಂದ್ಯದಲ್ಲಿ ಇರಾನ್‌ನ ಅಮೀರಮಹ್ಮದ್ ಹುಸೇನ್ ಹಾಜಿಪೌರಂಗನಿಯನ್ನು ಕೊಲ್ಹಾಪುರದ ಪೈಲ್ವಾನ್ ಶಿಕಂದರ್ ಶೇಖ್ ಮಣಿಸಿದರು. ಉಭಯ ಪೈಲ್ವಾನರ ಜಿದ್ದಾಜಿದ್ದಿನ ಸೆಣಸಾಟಕ್ಕೆ ಪ್ರೇಕ್ಷಕರು ಉಸಿರು ಬಿಗಿಹಿಡಿದು ಸಾಕ್ಷಿಯಾದರು.

ರಷ್ಯಾದ ಜಬರಲಿ ವಿರುದ್ಧ ಪುಣೆಯ ಪೈಲ್ವಾನ್ ಪೃಥ್ವಿರಾಜ್ ಮೋಹಳ್ ತಮ್ಮ ವಿಶಿಷ್ಟ ಪೇಚು ಪ್ರದರ್ಶಿಸಿ ಒಂದೇ ನೆಗೆತದಲ್ಲಿ ಚಿತ್‌ಗೊಳಿಸಿ ಜಯಶಾಲಿಯಾದರು. 2ನೇ ಕ್ರಮಾಂಕದಲ್ಲಿ ಇರಾನ್‌ನ ಅಲಿ ಅವರನ್ನು ಮುಂಬೈನ ಗಣೇಶ್ ಮಣಿಸಿದರು. 3ನೇ ಕ್ರಮಾಂಕದಲ್ಲಿ ವಿಕ್ರಮ ಘೋರ್ಪಡೆ ಹಾಗೂ ಶಿವಯ್ಯ ಕಂಕಣವಾಡಿ ಸಮಬಲದ ಪ್ರದರ್ಶನ ನೀಡಿದರು.

ಅಸ್ಲಮ್ ಹನಗಮಡಿ, ಮಹ್ಮದ್ ಯರಗಟ್ಟಿ, ಸಮರ್ಥ ತೇರದಾಳ, ಗುರು ಚಾಂದಕೋಟಿ, ಆನಂದ ಸಿದಾಪೂರ, ಗುತ್ತೆಪ್ಪ, ಚಿಮ್ಮಡದ ಬೀರಪ್ಪ, ಲಾಡಸಾಬ ಹನಗಂಡಿ, ಜುನೇದ್ ಹನಗಂಡಿ, ಮನೋಜ್ ಸವಸುದ್ದಿ, ಶ್ರೀಶೈಲ ಶಿರೋಳ, ಅಮೀನ್ ಹನಗಮಡಿ, ಸೋನು ಜಾಧವ್, ಮಲ್ಲಿಕಾರ್ಜುನ ಹಾರೂಗೇರಿ, ಸಾಗರ ಇಚಿಡಿ, ಗಣೇಶ್ ಸಿಂದಗಿ, ಸಮೀರ್ ಹನಗಂಡಿ, ಗಜಾನಂದ ಹನಗಂಡಿ, ಆನಂದ ಹನಗೋಜಿ, ಸಿದ್ಧಾರೂಢ ತೇರದಾಳ, ವಿಷ್ಣವ ಪಾಟೀಲ ಹಾಗೂ ಸಂಜು ಇಂಗಳಗಿ ಸೇರಿದಂತೆ ಹಲವು ಮಲ್ಲರು ಗೆಲುವು ಸಾಧಿಸಿದರು.

ರಾಕೇಶ್ ಇಂಡಿ–ಸಚಿನ್ ಹಾರೂಗೇರಿ, ಬಸವರಾಜ ಯಲ್ಲಟ್ಟಿ–ವಿಶ್ವಜೀತ್ ರೂಪನವರ, ಮುರಘೇಂದ್ರ ಹಾರೂಗೇರಿ–ಪಾರ್ಥ ಕಂಗಾಳೆ ಹಾಗೂ ಶಿವಯ್ಯ–ವಿಕ್ರಮ ಜೋಡಿಗಳು ಸಮಬಲ ಪ್ರದರ್ಶಿಸಿದವು. ಉಸ್ತಾದರು ಪಂದ್ಯವನ್ನು ಅಂತ್ಯಗೊಳಿಸಿದ್ದರಿಂದ ಪ್ರೇಕ್ಷಕರಿಗೆ ಕೊಂಚ ನಿರಾಸೆಯಾಯಿತು.

ಒಟ್ಟು 82 ಜೋಡಿಗಳು ಮೈದಾನದಲ್ಲಿ ಸೆಣಸಾಡಿ ಕುಸ್ತಿ ಪ್ರೇಮಿಗಳನ್ನು ರಂಜಿಸಿದರು. ತಮ್ಮಿಷ್ಟದ ಪೈಲ್ವಾನರು ಗೆಲುವು ಸಾಧಿಸಿದಾಗ ಪ್ರೇಕ್ಷಕರು ನಗದು ಬಹುಮಾನ ನೀಡಿ ಮಲ್ಲರನ್ನು ಹುರಿದುಂಬಿಸಿದರು. ಹಿರೇಮಠ ಗಂಗಾಧರ ದೇವರು ಮೈದಾನ ಪೂಜೆ ನೆರವೇರಿಸಿದರು.

ತೇರದಾಳ ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಬಸವರಾಜ ಕೊಣ್ಣೂರ, ಡಾ.ಮಹಾವೀರ ದಾನಿಗೊಂಡ, ವಿಜಯಮಹಾಂತ ನಾಡಗೌಡ, ಕುಸ್ತಿ ಕಮಿಟಿ ಅಧ್ಯಕ್ಷ ನಿಂಗಪ್ಪ ಮಾಲಗಾಂವಿ ಸೇರಿ ಹಲವರು ಇದ್ದರು. ಈನ್ನಪ್ಪ ಸವದತ್ತಿ, ಬಸಪ್ಪ ಮುಕರಿ, ನಿಂಗಪ್ಪ ಕಂಟಿಕಾರ, ಹನುಮಂತ ಪುರಾಣಿಕ, ಸಂಜು ಮುಕರಿ ಹಾಗೂ ಕಲ್ಲಪ್ಪ ಶಿರೋಳ ಅವರು ಉಸ್ತಾದರಾಗಿ ಪಂದ್ಯಾವಳಿಯ ಯಶಸ್ವಿಗೆ ಶ್ರಮಿಸಿದರು.