ಧಾರವಾಡ: ನಮ್ಮ ಪರಂಪರೆ ಮುಂದುವರೆಸಿಕೊಳ್ಳುವ ಮುಖಾಂತರ ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನಗರದ ಕರ್ನಾಟಕ ಕಾಲೇಜಿನ ಮೈದಾನದಲ್ಲಿ ಧಾರವಾಡ ಹೋಟೆಲ್ ಮತ್ತು‌ ಬೇಕರಿ ಒಡೆಯರ ಸಂಘ ಆಯೋಜಿಸಿದ್ದ ಆಳ್ವಾಸ್ ನುಡಿಸಿರಿ ವಿರಾಸತ್‌ನ ಧಾರವಾಡ ಘಟಕ ಸಾಂಸ್ಕೃತಿಕ ಸಂಭ್ರಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಕೀಯರ ದೌರ್ಜನ್ಯಕ್ಕೆ ಸಿಲುಕಿ ಭಾರತೀಯ ಸಂಸ್ಕೃತಿ ನಲುಗಿ ಹೋಗಿದೆ. ಇದರಿಂದ ನಮ್ಮ ಪೂರ್ವಜರಿಂದ ಬಂದ ಕಲೆಗಳನ್ನು ಉಳಿಸುವತ್ತ ಗಮನಹರಿಸಬೇಕು. ಈ‌ ದಿಶೆಯಲ್ಲಿ ಆಳ್ವಾ ನುಡಿಸಿರಿ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಸೇರಿಸಿಕೊಂಡು ದೇಶಿ ಸಂಸ್ಕೃತಿ ಬೆಳೆಸಿಕೊಂಡು ಬರಲಾಗುತ್ತಿದೆ. ಎಲ್ಲ ಕಲಾ ಪ್ರಕಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಲೆಯನ್ನು ಧಾರವಾಡ ನಗರದಲ್ಲಿ ಪ್ರದರ್ಶಿಸುವ ಮೂಲಕ ಉತ್ತಮ ಕೆಲಸ ಮಾಡಲಾಗುತ್ತಿದೆ. ಇಂತಹ ಪ್ರಯತ್ನಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೂಡಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ ಮಾತನಾಡಿ, ಬೃಹತ್ ಪ್ರಮಾಣದ ಯುವ ಸಂಪತ್ತು ಹೊಂದಿರುವ ಭಾರತವು ಸಾಂಸ್ಕೃತಿಕ ವಾಗಿ ತನ್ನ ಪಾರಮ್ಯ ಮೆರೆದಿದೆ. ಅನೇಕ ಪ್ರಕಾರದ‌ ನೃತ್ಯ, ಗಾಯನ, ವಾದ್ಯ ನುಡಿಸುವಿಕೆ ನಮ್ಮನ್ನು ಇಂದಿಗೂ ರಂಜಿಸುತ್ತಿವೆ. ಇವುಗಳ ಜೊತೆ ಜಾನಪದ ಕಲೆಗಳು ಭಾರತೀಯತೆಯನ್ನು ಮತ್ತಷ್ಟು ಸಮೃದ್ಧಗೊಳಿಸಿವೆ.

ಸೌಂದರ್ಯ ಪ್ರಜ್ಞೆ, ಸಂಗೀತ ಪ್ರೀತಿ ಇಲ್ಲದವರು ನಮ್ಮ ಪರಂಪರೆಗೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.


ಮೇಯರ್‌ ಜ್ಯೋತಿ ಪಾಟೀಲ, ಉಪ‌ಮೇಯರ್‌ ಸಂತೋಷ ಚವ್ಹಾಣ, ಮಾಜಿ ಮೇಯರ್‌ರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ, ರಾಜ್ಯ ಹೊಟೆಲ್ ಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಪ್ರದೀಪ‌ ಪಕ್ಕಳ, ಎಸ್ ಡಿಎಂ ಸೊಸೈಟಿ ಕಾರ್ಯದರ್ಶಿ ಡಾ.ಜೀವಂಧರಕುಮಾರ, ಕಿರಣ ಹೆಗಡೆ, ಗೋಪಾಲ ಶೆಟ್ಟಿ ವೇದಿಕೆಯಲ್ಲಿದ್ದರು.