ಕನಕಪುರ: ಆರ್ಯನ್ ಸಂಸ್ಥೆ ಮಾಲೀಕ ಬಾಲಕೃಷ್ಣ ಆರ್ಯ ಹಾಗೂ ಪ್ರಧ್ಯುಮ್ನ ಆರ್ಯರ ಮೂರು ವರ್ಷಗಳಿಗೂ ಅಧಿಕ ಸಂಶೋಧನೆಯ ಫಲವಾಗಿ ದೇಶದಲ್ಲೇ ಮೊದಲ ಬಾರಿಗೆ ಸ್ವದೇಶಿ ಸ್ವಯಂಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರವನ್ನು ಆವಿಷ್ಕರಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಹೇಳಿದರು
ಕನಕಪುರ: ಆರ್ಯನ್ ಸಂಸ್ಥೆ ಮಾಲೀಕ ಬಾಲಕೃಷ್ಣ ಆರ್ಯ ಹಾಗೂ ಪ್ರಧ್ಯುಮ್ನ ಆರ್ಯರ ಮೂರು ವರ್ಷಗಳಿಗೂ ಅಧಿಕ ಸಂಶೋಧನೆಯ ಫಲವಾಗಿ ದೇಶದಲ್ಲೇ ಮೊದಲ ಬಾರಿಗೆ ಸ್ವದೇಶಿ ಸ್ವಯಂಚಾಲಿತ ರೇಷ್ಮೆ ನೂಲು ತೆಗೆಯುವ ಯಂತ್ರವನ್ನು ಆವಿಷ್ಕರಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಹೇಳಿದರು.
ನಗರದ ಆರ್ಯನ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನೂತನ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಬಾರಿಗೆ ಭಾರತೀಯ ತಂತ್ರಜ್ಞಾನದಿಂದ ವಿನ್ಯಾಸಗೊಳಿಸುವ ಈ ಸ್ವಯಂ ಚಾಲಿತ ಯಂತ್ರ ದೇಶದ ಆತ್ಮ ನಿರ್ಭರತೆಯ ಇತಿಹಾಸಕ್ಕೆ ಮಹತ್ವದ ಸೇರ್ಪಡೆಯಾಗಿದೆ ಎಂದರು.ದೇಶದಲ್ಲಿ ರೇಷ್ಮೆ ಉದ್ಯಮ ಹಲವಾರು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಸ್ವದೇಶಿ ನಿರ್ಮಿತ ಯಂತ್ರ ತಯಾರಿಸಿರುವುದು ಹೆಮ್ಮೆ ಪಡುವ ವಿಷಯ. ರೇಷ್ಮೆ ಕ್ಷೇತ್ರದಲ್ಲಿ ಹೆಚ್ಚಿನ ನೂಲು ತೆಗೆಯಲು ಅನುಕೂಲ ಕಲ್ಪಿಸುವ ಸ್ವಯಂ ಚಾಲಿತ ಯಂತ್ರ ಇದಾಗಿದ್ದು, ರೀಲರ್‌ಗಳು ಮಾನವ ಸಂಪನ್ಮೂಲವನ್ನ ಕಡಿಮೆ ಮಾಡಿ ನೂಲು ತಯಾರಿಸುವಲ್ಲಿ ಸಮಯ ಹಾಗೂ ವೆಚ್ಚ ಉಳಿತಾಯ ವಾಗಲಿದೆ. ಇಂತಹ ಹಲವು ಯಂತ್ರಗಳನ್ನು ಕಾಲಮಿತಿಯಲ್ಲಿ ತಯಾರು ಮಾಡಿ ರೇಷ್ಮೆ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ನಮ್ಮ ರೇಷ್ಮೆ ಉತ್ಪನ್ನಗಳು ದೇಶವಷ್ಟೇ ಅಲ್ಲದೆ ವಿದೇಶಿಗರ ಜನಮನ ಸೆಳೆಯುವಲ್ಲಿ ವಿಶಿಷ್ಟ ಮೋಡಿ ಮಾಡಿವೆ. ಸಾಂಪ್ರದಾಯಿಕವಾಗಿ ಚರಕ ಬಳಸಿ ರೇಷ್ಮೆ ಗೂಡಿನಿಂದ ನೂಲು ತೆಗೆಯುತ್ತಿದ್ದ ಕಾಲವೊಂದಿತ್ತು. ತಂತ್ರಜ್ಞಾನ ಮುಂದುವರೆದಂತೆ ಈ ಕ್ಷೇತ್ರದಲ್ಲಿ ಅನೇಕ ಹೊಸಹೊಸ ಆವಿಷ್ಕಾರ, ಯಂತ್ರಗಳು ಮತ್ತು ಯಾಂತ್ರಿಕ ವ್ಯವಸ್ಥೆಗಳನ್ನು ಅಭಿವೃದ್ಧಿಯಾಗಿಸಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆ ವ್ಯಾಪಕಗೊಳ್ಳುತ್ತಿದ್ದ ಕಾಲದಲ್ಲಿ ರೇಷ್ಮೆ ನೂಲು ತೆಗೆಯುವಲ್ಲು ಭಾರತೀಯತೆಯನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ. ಸಂಸ್ಥೆಯ ಮಾಲೀಕ ಮತ್ತು ಅವರ ಮಗನ ಜೋಡಿ ಸಮರ್ಪಣೆ ಮಾಡಿರುವ ಯಂತ್ರ ನಿಜಕ್ಕೂ ದೇಶವೇ ಹೆಮ್ಮೆ ಪಡೆಯುವಂತದ್ದು. ಬಹುಶಃ ಜಪಾನ್ ಮತ್ತು ಚೀನಾಗಳಲ್ಲಿ ಮಾತ್ರ ಲಭ್ಯ ವಿರುವ ಈ ಯಂತ್ರ ಇನ್ನು ಮುಂದೆ ಭಾರತದಲ್ಲಿಯೇ ಲಭ್ಯವಾಗಲಿದೆ ಎಂದು ಹೇಳಿದರು.ಆರ್ಯ ಇಂಜಿನಿಯರಿಂಗ್ ಮಾಲೀಕ ಬಾಲಕೃಷ್ಣ ಆರ್ಯ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲು ತಂತ್ರಜ್ಞಾನ ಸಹಾಯ ಮಾಡುತ್ತಿದೆ. ನಾವು ಹಲವಾರು ದಶಕಗಳಿಂದ ಈ ಸಂಸ್ಥೆಯನ್ನ ನಡೆಸಿಕೊಂಡು ಬರುತ್ತಿದ್ದೇವೆ. ಭಾರತವು ಆಧುನಿಕ ಡಿಜಿಟಲ್ ಮೂಲ ಸೌಕರ್ಯವನ್ನು ಸೃಷ್ಟಿಸುತ್ತಿದೆ. ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ರಾಜ್ಯದ ಪ್ರತಿಯೊಂದು ವರ್ಗಕ್ಕೂ ತಲುಪುತ್ತಿದೆ. ಚೀನಾ ರೇಷ್ಮೆ ಹಾವಳಿ, ಕಾರ್ಮಿಕರ ಕೊರತೆ ಹಾಗೂ ನೀರಿನ ಅಭಾವಕ್ಕೆ ಸಿಲುಕಿ ನಲುಗಿರುವ ದೇಶದ ರೇಷ್ಮೆ ಉದ್ಯಮ ಆಧುನಿಕ ತಂತ್ರಜ್ಞಾನದ ಹೊಸ ಸ್ಪರ್ಶ ನೀಡುವ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಇದನ್ನು ಅವಿಷ್ಕಾರಗೊಳಿಸಲಾಗಿದೆ. ಈ ಹೊಸ ಯಂತ್ರಕ್ಕೆ10,800 ಬಗೆಯ ವಿಭಿನ್ನ ಬಿಡಿ ಭಾಗಗಳನ್ನು ಬಳಸಲಾಗಿದೆ. ಬಹುತೇಕ ನಾವೇ ವಿನ್ಯಾಸ ಮಾಡಿ ತಯಾರಿಸಿರುವ ಬಿಡಿಭಾಗಳಿಂದ ತಯಾರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎಸ್‌ಟಿಆರ್‌ಐ ನಿರ್ದೇಶಕ ಡಾ.ಪೆರಿಯಸಾಮಿ, ಮಾಜಿ ನಿರ್ದೇಶಕ ನಾಯಕ್, ಸೂಲಿಬೆಲೆ ಚಕ್ರವರ್ತಿ ಸೇರಿದಂತೆ ಅನೇಕರು ಹಾಜರಿದ್ದರು. (ಫೋಟೋ ಕ್ಯಾಫ್ಷನ್)ಕನಕಪುರ ಆರ್ಯನ್ ಇಂಜಿನಿಯರಿಂಗ್ ಆವರಣದಲ್ಲಿ ಸ್ವದೇಶಿ ನಿರ್ಮಿತ ಸ್ವಯಂ ಚಾಲಿತ ರೇಷ್ಮೆನೂಲು ತೆಗೆಯುವ ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್, ಬಾಲಕೃಷ್ಣ ಆರ್ಯ ಹಾಗೂ ಪ್ರಧ್ದುಮ್ನ ಆರ್ಯ, ಪೆರಿಯಸಾಮಿ ಮತ್ತಿತರರು ಉಪಸ್ಥಿತರಿದ್ದರು.