ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗೆ ಬೀಗ ಬಿದ್ದಿದೆ. ಕಳೆದ ವರ್ಷದ ಸೆಪ್ಟಂಬರ್ 9 ರಂದು ಪ್ರಾರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಪ್ರಾರಂಭಗೊಂಡ ಕೇವಲ ನಾಲ್ಕು ತಿಂಗಳಲ್ಲಿ ಕ್ಲೋಸ್ ಆಗಿದೆ
ಎಸ್.ನಾಗಭೂಷಣ ಕನ್ನಡಪ್ರಭವಾರ್ತೆ ತುರುವೇಕೆರೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗೆ ಬೀಗ ಬಿದ್ದಿದೆ. ಕಳೆದ ವರ್ಷದ ಸೆಪ್ಟಂಬರ್ 9 ರಂದು ಪ್ರಾರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಪ್ರಾರಂಭಗೊಂಡ ಕೇವಲ ನಾಲ್ಕು ತಿಂಗಳಲ್ಲಿ ಕ್ಲೋಸ್ ಆಗಿದೆ.ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಆರಂಭದಲ್ಲಿ ಜಾಗದ ಸಮಸ್ಯೆ ತಲೆದೋರಿತ್ತು. ಅಂತಿಮವಾಗಿ ಮಿನಿ ವಿಧಾನಸೌಧದ ಹಿಂಬದಿಯೇ ಇಂದಿರಾ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಯಿತು. ಅಂತೂ ಇಂತು ಕಳೆದ ಸೆಪ್ಟಂಬರ್ 9ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಉದ್ಘಾಟನೆಯೂ ಆಯಿತು. ಆದರೆ ಆರಂಭದಲ್ಲೇ ಇಂದಿರಾ ಕ್ಯಾಂಟೀನ್ ಗೆ ವಿಘ್ನವಾಗಿತ್ತು. ಅಡುಗೆ ಮನೆಯನ್ನು ಸಂಪೂರ್ಣ ಅಣಿಗೊಳಿಸದ ಹಿನ್ನೆಲೆಯಲ್ಲಿ ಎಂಟು ದಿನಗಳ ನಂತರ ಜನರ ಸೇವೆಗೆ ಸಿದ್ಧವಾಯಿತು. ಅಂದರೆ 15ರಂದು ಅಧಿಕೃತವಾಗಿ ಪ್ರಾರಂಭವಾಯಿತು.
ಆರಂಭದಲ್ಲಿ ಉತ್ತಮವಾಗಿದ್ದ ಇಂದಿರಾ ಕ್ಯಾಂಟೀನ್ ಗೆ ಗುತ್ತಿಗೆ ಪಡೆದವರು ನಂತರದ ದಿನಗಳಲ್ಲಿ ದಿನಸಿ ಪದಾರ್ಥಗಳನ್ನು ಸರಬರಾಜು ಮಾಡಲು ಬೇಜವಾಬ್ದಾರಿ ತೋರಿದರು. ಇಲ್ಲಿ ಐವರು ಸಿಬ್ಬಂದಿ ನೇಮಕ ಮಾಡಲಾಗಿತ್ತು. ಇವರಲ್ಲಿ ಒಬ್ಬರು ಪ್ರಮುಖ ಅಡುಗೆಯವರು, ಇಬ್ಬರು ಸ್ವಚ್ಚಗೊಳಿಸುವವರು, ಓರ್ವರು ಟೋಕನ್ ಕೊಡುವವರು, ಮತ್ತೊಬ್ಬರು ಇಂದಿರಾ ಕ್ಯಾಂಟೀನ್ ನ ವ್ಯವಸ್ಥೆ ನೋಡಿಕೊಳ್ಳುವವರು ಎಂದು ನೇಮಿಸಲಾಗಿತ್ತು. ಆರಂಭದ ಒಂದೆರೆಡು ತಿಂಗಳು ಅಲ್ಲಿನ ಸಿಬ್ಬಂದಿಗೆ ಸರಿಯಾಗಿ ಸಂಬಳ ಹಾಕಲಾಗುತ್ತಿತ್ತು. ದಿನ ಕಳೆದಂತೆ ಸಂಬಳ ಕೊಡುವುದು ದುಸ್ತರವಾಯಿತು. ದಿನಸಿ ಪದಾರ್ಥಗಳನ್ನು ಕೊಡಲು ಹಿಂದೇಟು ಹಾಕಿದರು. ಪ್ರತಿ ದಿನ ಬೆಳಗ್ಗೆ 200 ಮಂದಿಗೆ ತಿಂಡಿ, ಮಧ್ಯಾಹ್ನ 200 ಮಂದಿಗೆ ಊಟ, ರಾತ್ರಿ 200 ಮಂದಿಗೆ ಊಟ ನೀಡಬೇಕೆಂಬ ಆದೇಶವಿದೆ. ಬೆಳಗ್ಗೆಯ ತಿಂಡಿ ಮತ್ತು ಮಧ್ಯಾಹ್ನದ ಊಟ ಕ್ಕೆ ಡಿಮ್ಯಾಂಡ್ ಇತ್ತು. ಆದರೆ ರಾತ್ರಿಯ ವೇಳೆಯ ಊಟಕ್ಕೆ ಜನರು ನಿರಾಸಕ್ತಿ ತೋರುತ್ತಿದ್ದರು. ಹಾಗಾಗಿ ಬೆಳಗ್ಗೆ ಮತ್ತು ಮಧ್ಯಾಹ್ನವೇ ನಿಗದಿತ ಸಂಖ್ಯೆಗಿಂತ ಕೊಂಚ ಹೆಚ್ಚು ಜನರಿಗೆ ಊಟ ಮತ್ತು ತಿಂಡಿಯ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಪ್ರತಿ ದಿನ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಕನಿಷ್ಠವೆಂದರೂ ಆರೇಳು ಸಾವಿರ ಖರ್ಚು ಆಗುತ್ತಿತ್ತು. ಆದರೆ ಗುತ್ತಿಗೆ ವಹಿಸಿಕೊಂಡಿರುವವರು ತಮಗೆ ಇನ್ನೂ ಸರ್ಕಾರದಿಂದ ಹಣ ಬಂದಿಲ್ಲ. ಹಾಗಾಗಿ ಟೋಕನ್ ನಲ್ಲಿ ಬರುವ ಹಣದಿಂದಲೇ ಊಟ ತಿಂಡಿಗೆ ಬೇಕಾಗುವ ದಿನಸಿ ಪದಾರ್ಥಗಳನ್ನು ತನ್ನಿ ಎಂದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಚನೆ ನೀಡಿದ್ದರಂತೆ. ಅಲ್ಲದೇ ಆರಂಭದಲ್ಲಿ ಬಂದಿದ್ದ ಇಂದಿರಾ ಕ್ಯಾಂಟೀನ್ ನ ವ್ಯವಸ್ಥಾಪಕರು ಇದುವರೆಗೂ ಸುಳಿದಿಲ್ಲವಂತೆ. ತಿಂಡಿಯ ಟೋಕನ್ ನಿಂದ ಒಂದು ಸಾವಿರ, ಮಧ್ಯಾಹ್ನದ ಊಟ ಟೋಕನ್ ನಿಂದ 2 ಸಾವಿರ ರು. ಮಾತ್ರ ಪ್ರತಿದಿನ ಸಂಗ್ರಹವಾಗುತ್ತಿತ್ತು. ಇದೇ ಜೀವನವೆಂದು ನಂಬಿದ್ದ ಅಲ್ಲಿನ ಸಿಬ್ಬಂದಿ ದಿನಸಿ ಅಂಗಡಿಯವರಲ್ಲಿ ಕಾಡಿ ಬೇಡಿ ಸಾಲ ತಂದು ಒಂದಿಷ್ಟು ದಿನ ಇಂದಿರಾ ಕ್ಯಾಂಟೀನ್ ನಡೆಸಿದ್ದಾರೆ. ಇದು ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿ ಅಂಗಡಿಯವರಿಗೆ ಸಾಲದ ಹಣ ಕೊಡಲಾರದೇ ಇತ್ತ ಸಿಬ್ಬಂದಿ ಕದ್ದು ತಿರುಗುವ ಸ್ಥಿತಿ ಬಂದಿದೆ. ಇಲ್ಲಿ ದಿನಸಿ ಪದಾರ್ಥವೂ ಇಲ್ಲದೇ, ಅತ್ತ ಅಲ್ಲಿನ ಸಿಬ್ಬಂದಿಗೆ ಸಂಬಳವೂ ನೀಡದೇ ಇರುವ ಕಾರಣಕ್ಕೆ ಜನವರಿ 15 ರಿಂದಲೇ ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ.ತೇಪೆ ಹಚ್ಚುವ ಕಾರ್ಯ
ಸರಿಯಾಗಿ ದಿನಸಿ ಪದಾರ್ಥಗಳನ್ನು ಸರಬರಾಜು ಮಾಡದೇ, ಅಲ್ಲಿನ ಸಿಬ್ಬಂದಿಗೆ ಸಂಬಳ ನೀಡದೇ ಇರುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಬಂದ್ ಆಗಿದ್ದರೂ ಸಹ ಮರ್ಯಾದೆ ಮುಚ್ಚಿಕೊಳ್ಳಲು ಇಂದಿರಾ ಕ್ಯಾಂಟೀನ್ ನಲ್ಲಿ ಗ್ಯಾಪ್ ಪೈಪ್ ಲೈನ್ ಸೋರಿಕೆಯಾಗುತ್ತಿದೆ. ಅದು ದುರಸ್ಥಿಯಾಗುವ ತನಕ ಇಂದಿರಾ ಕ್ಯಾಂಟೀನ್ ನ್ನು ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಲೆಂದು ಗೇಟಿನ ಮುಂದೆ ಫಲಕ ಹಾಕಲಾಗಿದೆ. ಬಡವರಿಗೆ ಹಸಿದಿರುವವರಿಗೆ ಹೊಟ್ಟೆ ತುಂಬಿಸುತ್ತಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭಗೊಂಡ ಕೇವಲ 120 ದಿನಗಳಲ್ಲೇ ಮುಚ್ಚಿರುವುದು ಶೋಚನೀಯ ಸಂಗತಿ.