ಸಾರಾಂಶ
ರಾಜ್ಯ ಸರ್ಕಾರ ಕ್ಯಾಂಟೀನ್ ನಿರ್ಮಿಸುವುದೇ ಆದರೆ ಮುಸ್ಲಿಂರ ಖಬರಸ್ತಾನದಲ್ಲಿ ನಿರ್ಮಿಸಬೇಕು. ಹಿಂದೂಗಳ ಸ್ಮಶಾನವೇ ಬೇಕಾ? ಎಂದು ಪ್ರಶ್ನೆ.
ಹುಬ್ಬಳ್ಳಿ:
ಇಲ್ಲಿಯ ಮಂಟೂರ ರಸ್ತೆ ಬಳಿಯ ಶ್ರೀಸತ್ಯಹರಿಶ್ಚಂದ್ರ ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಿರುವ ಬಗ್ಗೆ ಶ್ರೀರಾಮಸೇನೆ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸೋಮವಾರ ಇಲ್ಲಿಯ ಮಂಟೂರ ರಸ್ತೆ ಸ್ಮಶಾನಕ್ಕೆ ಭೇಟಿ ನೀಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹಾಗೂ ಕಾರ್ಯಕರ್ತರು ಕ್ಯಾಂಟಿನ್ ಎದುರು ಕೆಲಹೊತ್ತು ಪ್ರತಿಭಟಿಸಿದರು. ನಂತರ ಸ್ಮಶಾನದ ಜಾಗದಲ್ಲಿ ಕ್ಯಾಂಟಿನ್ ನಿರ್ಮಿಸಿದ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿರುವುದು ಖಂಡನೀಯ. ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರದ ದರ್ಪದಿಂದ ಈ ರೀತಿ ಮಾಡಿದ್ದಾರೆ. ಕ್ಯಾಂಟೀನ್‌ನ್ನು ಕೂಡಲೇ ತೆರವುಗೊಳಿಸಬೇಕು. ಸ್ಮಶಾನದಲ್ಲಿ ನಿರ್ಮಿಸಿದ ಕ್ಯಾಂಟೀನ್‌ಗೆ ಯಾರು ಊಟಕ್ಕೆ ಬರುತ್ತಾರೆ? ಇಲ್ಲಿ ತಿಥಿ ಮಾಡಲು ಬರುತ್ತಾರೆ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ ಕ್ಯಾಂಟೀನ್ ನಿರ್ಮಿಸುವುದೇ ಆದರೆ ಮುಸ್ಲಿಂರ ಖಬರಸ್ತಾನದಲ್ಲಿ ನಿರ್ಮಿಸಬೇಕು. ಹಿಂದೂಗಳ ಸ್ಮಶಾನವೇ ಬೇಕಾ? ಎಂದು ಪ್ರಶ್ನಿಸಿದ ಮುತಾಲಿಕ್, ಪ್ರಸಾದ ಅಬ್ಬಯ್ಯ ಕೇವಲ ಮುಸ್ಲಿಂ ಸಮುದಾಯದ ಮತಗಳಿಂದ ಶಾಸಕರಾಗಿಲ್ಲ ಎಂಬುದನ್ನು ಮರೆಯಬಾರದು ಎಂದರು.ಸ್ಮಶಾನದ 10 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ರಸ್ತೆಗಾಗಿ ಅತಿಕ್ರಮಣ ಮಾಡಲಾಗಿದೆ. ಈಗ ಇಂದಿರಾ ಕ್ಯಾಂಟೀನ್ ನೆಪದಲ್ಲಿ ಸ್ಮಶಾನದ ಗೋಡೆ ಒಡೆಯಲಾಗಿದೆ. ತಕ್ಷಣ ಕ್ಯಾಂಟೀನ್ ಕಟ್ಟಡ ತೆರವುಗೊಳಿಸದಿದ್ದರೆ ಸ್ವತಃ ನಾವೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮಸೇನೆಯ ಮುಖಂಡರಾದ ಗಂಗಾಧರ ಕುಲಕರ್ಣಿ, ಅಣ್ಣಪ್ಪ ದಿವಟಗಿ, ಪ್ರವೀಣ ಮಾಳದಕರ, ಮಂಜುನಾಥ ಕಾಟಕರ, ಗುಣಧ ದಡೋತಿ ಇದ್ದರು.