ಇಂದಿರಾ ಕ್ಯಾಂಟೀನ್‌ ಸ್ಥಳಾಂತರ: ಶ್ರೀರಾಮಸೇನೆ ವಿಜಯೋತ್ಸವ

| Published : Sep 27 2024, 01:23 AM IST

ಸಾರಾಂಶ

ಶವಸಂಸ್ಕಾರ ಮಾಡುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಇದನ್ನು ಶ್ರೀರಾಮಸೇನೆ ವಿರೋಧಿಸಿದ ಹಿನ್ನೆಲೆ ಪಾಲಿಕೆ ಆಯುಕ್ತರು ಸ್ಥಳಾಂತರಿಸಲು ಮುಂದಾಗಿದೆ.

ಹುಬ್ಬಳ್ಳಿ:

ನಗರದ ಮಂಟೂರ ರಸ್ತೆಯ ಶ್ರೀಸತ್ಯ ಹರಿಶ್ಚಂದ್ರ ರುದ್ರಭೂಮಿಯಲ್ಲಿ ನಿರ್ಮಿಸಿದ್ದ ಇಂದಿರಾ ಕ್ಯಾಂಟೀನ್ ಅನ್ನು ಪಾಲಿಕೆ ಆಯುಕ್ತರು ಸ್ಥಳಾಂತರಿಸಲು ಆದೇಶಿದ ಹಿನ್ನೆಲೆ ಶ್ರೀರಾಮಸೇನೆ ಹಾಗೂ ವಿವಿಧ ದಲಿತರ ಸಂಘಟನೆಯ ಸದಸ್ಯರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ಇಲ್ಲಿಯ ಸ್ಟೇಷನ್ ರಸ್ತೆಯ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ ವಿಜಯೋತ್ಸವ ಮಾಡಿದರು.

ಈ ವೇಳೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಶವಸಂಸ್ಕಾರ ಮಾಡುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಇದನ್ನು ಶ್ರೀರಾಮಸೇನೆ ವಿರೋಧಿಸಿದ ಹಿನ್ನೆಲೆ ಪಾಲಿಕೆ ಆಯುಕ್ತರು ಸ್ಥಳಾಂತರಿಸಲು ಮುಂದಾಗಿದ್ದು, ಇದು ನಾವು ಮಾಡಿದ ಹೋರಾಟಕ್ಕೆ ಸಿಕ್ಕ ಜಯ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ತಾವು ಮಾಡಿದ ಕೆಲಸ ತಪ್ಪು ಅನಿಸಿಲ್ಲವಾ? ಅಧಿಕಾರ ಅಹಂಕಾರ ಸರಿಯಲ್ಲ. ಜನ ಸೇವಕರು ನೀವು. ಶಾಸಕರಾಗಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ಗೊತ್ತಿದೆ. ನಾನು ಅದೇ ರೀತಿ ಮಾತನಾಡಬಹುದು. ಕಳೆದ 50 ವರ್ಷ ಸಮಾಜಸೇವೆ, ಹೋರಾಟದಲ್ಲಿ ತೊಡಗಿದ್ದು, ಯಾರೊಂದಿಗೆ ಏನು ಮಾತನಾಡಬೇಕು ಎಂಬುವುದು ಆರ್‌ಎಸ್‌ಎಸ್ ಕಲಿಸಿದೆ. ನಿಮಗೆ ಯಾರು ಕಲಿಸಿದ್ದಾರೆ ಎಂದು ಹರಿಹಾಯ್ದರು.

ಸ್ಮಶಾನದಲ್ಲಿ ಯಾರು ಕ್ಯಾಂಟೀನ್ ನಿರ್ಮಿಸಿದ್ದಾರೋ ಅವರ ಮೇಲೆ ಕ್ರಮ ಆಗಬೇಕು. ಯಾರ ದುಡ್ಡಿನಿಂದ ಕಟ್ಟಲಾಗಿತ್ತು. ತಪ್ಪಿತಸ್ಥರಿಂದಲೇ ಕ್ಯಾಂಟೀನ್ ನಿರ್ಮಾಣಕ್ಕೆ ಖರ್ಚಾದ ಹಣ ತೆಗೆದುಕೊಳ್ಳಬೇಕು. ಅಲ್ಲಿ ರಸ್ತೆಗೆ ಜಾಗವನ್ನು ಅತಿಕ್ರಮಣ ಮಾಡಲಾಗಿದ್ದು, ತಕ್ಷಣ ಆ ಜಾಗ ಸಹ ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.ಮುಖಂಡ ಚಂದ್ರಶೇಖರ ಗೋಕಾಕ ಮಾತನಾಡಿ, ಸ್ಮಶಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ, ಮಂಜುನಾಥ ಕಾಟ್ಕರ್‌, ಅಣ್ಣಪ್ಪ ದಿವಟಗಿ, ಬಸವರಾಜ ಗೌಡರ, ಬಸು ದುರ್ಗದ, ಗುಣಧರ ದಡೋತಿ ಪಾಲ್ಗೊಂಡಿದ್ದರು.26ಎಚ್‌ಯುಬಿ2

ಇಂದಿರಾ ಕ್ಯಾಂಟೀನ್‌ ಸ್ಥಳಾಂತರ ಮಾಡಿದ್ದಕ್ಕೆ ಶ್ರೀರಾಮಸೇನೆ ವಿಜಯೋತ್ಸವ ಆಚರಿಸಿತು.