ಕಡೂರುರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಗಳ ಮೇಲ್ವಿಚಾರಣೆ ಮತ್ತು ಗುಣಮಟ್ಟ ಪರಿಶೀಲನೆ ಚಾಲನಾ ಸಮಿತಿಗೆ ಕಡೂರು ಕಾಂಗ್ರೆಸ್ ಮುಖಂಡ ಪಂಚನಹಳ್ಳಿ ಪ್ರಸನ್ನ ಪಿ.ಸಿ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಕಡೂರು
ರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಗಳ ಮೇಲ್ವಿಚಾರಣೆ ಮತ್ತು ಗುಣಮಟ್ಟ ಪರಿಶೀಲನೆ ಚಾಲನಾ ಸಮಿತಿಗೆ ಕಡೂರು ಕಾಂಗ್ರೆಸ್ ಮುಖಂಡ ಪಂಚನಹಳ್ಳಿ ಪ್ರಸನ್ನ ಪಿ.ಸಿ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಪಿ.ಸಿ.ಪ್ರಸನ್ನ ಯುವ ಕಾಂಗ್ರೆಸ್ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯರು ಮತ್ತು ಕಡೂರು ತಾಪಂ ಮಾಜಿ ಅಧ್ಯಕ್ಷರೂ ಆಗಿದ್ದಾರೆ.
ಕಡೂರು ಪಟ್ಟಣದ ಶಾಸಕರ ಜನಸೇವಕ ಕಚೇರಿಯಲ್ಲಿ ಸೋಮವಾರ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು, ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂಖಾನ್ ಮತ್ತು ಕಡೂರು ಶಾಸಕ ಕೆ.ಎಸ್.ಆನಂದ್ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ರಾಜ್ಯಮಟ್ಟದ ಸ್ಟೀರಿಂಗ್ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.ನಗರ ಪ್ರದೇಶದ ಬಡ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಗಮನಿಸಿ ಅವರಿಗೆ ಕೈಗೆಟಕುವ ದರದಲ್ಲಿ ಸಮತೋಲಿತ ಆಹಾರ ಪೂರೈಸುವುದು ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ ಉದ್ದೇಶವಾಗಿದೆ. ರಾಜ್ಯದ ತಾಲೂಕು ಮತ್ತು ಜಿಲ್ಲಾ ಕೇಂದ್ರ ಗಳಲ್ಲಿರುವ 173 ಸ್ಥಳೀಯ ಸಂಸ್ಥೆಗಳಲ್ಲಿ 248 ಇಂದಿರಾ ಕ್ಯಾಂಟೀನ್ ಗಳ ಪೈಕಿ ಬಿಬಿಎಂಪಿ ಹೊರತುಪಡಿಸಿ 197 ಇಂದಿರಾ ಕ್ಯಾಂಟೀನ್ ಗಳ ಯೋಜನೆ ನಿರ್ವಹಣೆಗೆ ಪೌರಾಡಳಿತ ನಿರ್ದೇಶನಾಲಯ ಸ್ಟೀರಿಂಗ್ ಸಮಿತಿ ರಚಿಸಿ ಮಾರ್ಗಸೂಚಿ ಹೊರಡಿಸಿದೆ.
ಅದರಂತೆ ಕ್ಯಾಂಟೀನ್ ಗಳಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟ, ಆಹಾರದ ರುಚಿ, ಗುಣಮಟ್ಟ, ಅಡುಗೆ ಕೋಣೆಗಳ ನಿರ್ವಹಣೆ ಮೊದಲಾದ ವಿಷಯಗಳ ಪರಿಶೀಲನಾ ಸಮಿತಿಗೆ ನನ್ನನ್ನು ಅಧ್ಯಕ್ಷನಾಗಿ ನೇಮಿಸಲಾಗಿದೆ. ರಾಜ್ಯ ಸರ್ಕಾರ, ಸಚಿವರು ಮತ್ತು ಶಾಸಕರ ಆಶಯದಂತೆ ಬಡ ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಅಭಿನಂದಿಸಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಗಳು ಆರೋಗ್ಯ, ಕಚೇರಿ, ಕೂಲಿ ಕೆಲಸ ಅರಸಿ ಬರುವ ಶ್ರಮಿಕ ವರ್ಗ ಮತ್ತು ಬಡಜನರ ಹೊಟ್ಟೆ ತುಂಬಿಸುವ ಮಹತ್ತರ ಕೆಲಸ ಮಾಡುತ್ತಿವೆ. ಇಂತಹ ಸೇವೆಯಲ್ಲಿ ಯಾವುದೇ ಲೋಪಗಳಾಗದಂತೆ ಚಾಲನಾ ಸಮಿತಿ ರಚಿಸಿ, ಕ್ಷೇತ್ರದ ಹಳ್ಳಿಗಾಡಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ವಿವಿಧ ಹುದ್ದೆ ಅಲಂಕರಿಸಿ ಪ್ರಮುಖ ಕಾರ್ಯಕರ್ತರಾಗಿ ಬೆಳೆದ ಪಂಚನಹಳ್ಳಿ ಪ್ರಸನ್ನ ಅವರನ್ನು ಸಮಿತಿ ಅಧ್ಯಕ್ಷರಾಗಿ ಸರ್ಕಾರ ನೇಮಿಸಿರುವುದು ಕಾರ್ಯಕರ್ತರಿಗೆ ಸಂತಸ ತಂದಿದೆ. ಇದು ಅವರ ಪಕ್ಷನಿಷ್ಠೆಗೆ ದೊರೆತ ಫಲವಾಗಿದೆ. ಇದೇ ಜ.21ರ ಬುಧವಾರ ಮಧ್ಯಾಹ್ನ ಬೆಂಗಳೂರಿನ ಅಂಬೇಡ್ಕರ್ ವೀಧಿ ವಿಶ್ವೇಶ್ವರಯ್ಯ ಟವರ್ ನಲ್ಲಿ ಪದಗ್ರಹಣ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭ ಕೋರುವಂತೆ ಮನವಿ ಮಾಡಿದರು. ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಸೋಮಶೇಖರ್ ಕೆರೆಸಂತೆ, ಸತೀಶ್ ನಾಯ್ಕ, ಹಬೀದ್, ಮುರಳಿ, ಸಂತೋಷ್, ಗೋವಿಂದ್ ಸೇರಿದಂತೆ ಮತ್ತಿತರರು ಇದ್ದರು.19ಕೆಕೆಡಿಯು1. ಕಡೂರು ಪಟ್ಟಣದ ಶಾಸಕರ ಜನಸೇವಕ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ಗಳ ಮೇಲ್ವಿಚಾರಣೆ ಮತ್ತು ಗುಣಮಟ್ಟ ಪರಿಶೀಲನೆಯ ಚಾಲನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಂಚನಹಳ್ಳಿ ಪ್ರಸನ್ನ ಪಿ.ಸಿ ಅವರನ್ನು ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ನಿಂದ ಅಭಿನಂದಿಸಲಾಯಿತು. ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ ಮತ್ತಿತರರು ಹಾಜರಿದ್ದರು.