ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ: ಶಾಸಕ

| Published : Dec 25 2024, 12:47 AM IST

ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಆಶ್ರಯದಲ್ಲಿ ಸ್ಥಳೀಯ ಕನ್ನಿಕಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡರು. ಕುಶಾಲನಗರ ತಾಲೂಕು ಅಭಿವೃದ್ಧಿ ವಿಚಾರಕ್ಕೆ‌ ಸಂಬಂಧಿಸಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಶಾಸಕರೊಂದಿಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನಗರದಲ್ಲಿ ಯುಜಿಡಿ ಕಾಮಗಾರಿ ಚಾಲನೆ ಹಂತದಲ್ಲಿದೆ, ಮುಂದಿನ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಆಶ್ರಯದಲ್ಲಿ ಸ್ಥಳೀಯ ಕನ್ನಿಕಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಉತ್ತರಿಸಿದರು..

ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಅಭಿವೃದ್ಧಿ ವಿಚಾರಕ್ಕೆ‌ ಸಂಬಂಧಿಸಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಶಾಸಕರೊಂದಿಗೆ ಚರ್ಚಿಸಿದರು.

ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು, ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ‌ ಹರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಅಪೂರ್ಣವಾಗಿರುವ ಪಟ್ಟಣದ ಒಳಚರಂಡಿ ಯೋಜನೆ, ಕಲಾಭವನ, ಪುರಸಭೆ ವಾಣಿಜ್ಯ ಸಂಕೀರ್ಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಕಾಮಗಾರಿ ಪೂರ್ಣಗೊಳಿಸಬೇಕು, ಹಾರಂಗಿಯಿಂದ ಕುಡಿಯುವ ನೀರಿನ‌ ಯೋಜನೆ‌ ಅನುಷ್ಠಾನ, ಎರಡನೇ ಕೈಗಾರಿಕಾ ಬಡಾವಣೆ ಸ್ಥಾಪನೆ, ವಾಹನ ದಟ್ಟಣೆ ನಿಭಾಯಿಸಲು ರಿಂಗ್ ರೋಡ್ ನಿರ್ಮಾಣ, ಸುಸಜ್ಜಿತ ಕ್ರೀಡಾಂಗಣ, ದಿ.ಮಾಜಿ ಮುಖ್ಯಮಂತ್ರಿ ಗುಂಡುರಾವ್ ಪುತ್ಥಳಿ ಸ್ಥಾಪನೆ, ಹೃದ್ರೋಗ ಘಟಕ ಸ್ಥಾಪನೆ, ಬೀದಿನಾಯಿಗಳ‌ ಹಾವಳಿ ನಿಯಂತ್ರಣ, ರುದ್ರ ಭೂಮಿಯಲ್ಲಿ ಎಲೆಕ್ಟ್ರಿಕ್ ಬರ್ನಿಂಗ್ ಹೆಚ್ಚುವರಿ ವ್ಯವಸ್ಥೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು, ಕಾವೇರಿ ನದಿ ಪ್ರವಾಹ ತಡೆಗಟ್ಟುವ ಹಿನ್ನಲೆಯಲ್ಲಿ ನದಿ ನಿರ್ವಹಣೆ, ತಾವರೆಕೆರೆ ಅಭಿವೃದ್ಧಿ, ಜಿಎಂಪಿ ಶಾಲೆ ಮುಂಭಾಗ ಸ್ಕೈವಾಕ್ ನಿರ್ಮಾಣ ಎಂಬಿತ್ಯಾದಿ ಬೇಡಿಕೆಗಳನ್ನು ಸಭೆಯಲ್ಲಿದ್ದ ಪ್ರಮುಖರು ಶಾಸಕರ ಮುಂದಿಟ್ಟರು.

ಅಮೃತ್ 2 ಯೋಜನೆಯಡಿ 40 ಕೋಟಿ ರು. ವೆಚ್ಚದಲ್ಲಿ ಹಾರಂಗಿ-ಕೂಡಿಗೆ‌ ನದಿಗಳ ಸಂಗಮ ಭಾಗದಿಂದ ಜಾಕ್ ವೆಲ್ ಮೂಲಕ ನೀರೆತ್ತಿ ಪೂರೈಸುವ ಯೋಜನೆ ಕಾಮಗಾರಿ ಈಗಾಗಲೆ ಪ್ರಗತಿಯಲ್ಲಿದೆ. ಈ ಮೂಲಕ ಬೇಸಿಗೆಯಲ್ಲಿ ‌ ಪಟ್ಟಣದ ಕುಡಿವ ನೀರಿನ ಅಭಾವ ನೀಗಲಿದೆ. ಅಪೂರ್ಣವಾಗಿರುವ ಪುರಸಭೆ ವಾಣಿಜ್ಯ‌ ಸಂಕೀರ್ಣವನ್ನು ಹೆಚ್ಚುವರಿ ಎರಡು ಕೋಟಿ ವಿನಿಯೋಗಿಸಿ ಪೂರ್ಣಗೊಳಿಸಲಾಗುವುದು ಎಂದರು.

ಕಲಾಭವನ ಕಾಮಗಾರಿ ಕೆಲವು ತಾಂತ್ರಿಕ‌ ಸಮಸ್ಯೆಯಿಂದ ನಿಧಾನವಾಗಿದ್ದು ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವ ಸಂಬಂಧ ಜಾಗದ ವಿವಾದ ನ್ಯಾಯಾಲಯದಲ್ಲಿರುವ ಬಗ್ಗೆ ಶಾಸಕರು ಸಭೆಯ ಗಮನಕ್ಕೆ‌ ತಂದರು.

ಮಡಿಕೇರಿಯಲ್ಲಿ ಹೃದ್ರೋಗ ಘಟಕ ತೆರೆಯಲು ಈಗಾಗಲೆ ಕ್ರಮವಹಿಸಲಾಗಿದೆ, ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಅಭಿವೃದ್ಧಿಗೆ ಈಗಾಗಲೆ ಸಾರಿಗೆ ಸಚಿವರ ಗಮನ ಸೆಳೆಯಲಾಗಿದೆ ಎಂದರು.

ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿರುವ ಎಂಆರ್ ಐ ವ್ಯವಸ್ಥೆ ಬಗ್ಗೆ ಹೆಚ್ಚಿನ ಪ್ರಚಾರದೊಂದಿಗೆ ರೋಗಿಗಳು ಸೌಲಭ್ಯ ಪಡೆದುಕೊಳ್ಳಲು ಶಾಸಕರು ಸೂಚಿಸಿದರು. ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಯಾಗಲಿದ್ದು, ಆಹಾರ ಗುಣಮಟ್ಟದ ಬಗ್ಗೆ ಅಂಜಿಕೆಯಿಲ್ಲದೆ ಎಲ್ಲರೂ ಉಪಯೋಗಪಡೆದುಕೊಳ್ಳುವಂತಾಗಬೇಕು ಎಂದರು.

ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ವಕೀಲ ಆರ್.ಕೆ.ನಾಗೇಂದ್ರಬಾಬು, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ಚಿತ್ರಾ ರಮೇಶ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು‌ ಉಪಸ್ಥಿತರಿದ್ದರು.