ಪೂರ್ಣಗೊಂಡರೂ ಆರಂಭವಾಗದ ಶಿಗ್ಗಾಂವಿ ಇಂದಿರಾ ಕ್ಯಾಂಟೀನ್‌

| Published : Oct 06 2025, 01:01 AM IST

ಸಾರಾಂಶ

ಬಡವರಿಗೆ, ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಇಲ್ಲಿನ ಹೊಸ ಬಸ್‌ನಿಲ್ದಾಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಎರಡು ವರ್ಷ ಗತಿಸಿದರೂ ಆರಂಭವಾಗಿಲ್ಲ.

ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಬಡವರಿಗೆ, ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಇಲ್ಲಿನ ಹೊಸ ಬಸ್‌ನಿಲ್ದಾಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಎರಡು ವರ್ಷ ಗತಿಸಿದರೂ ಆರಂಭವಾಗಿಲ್ಲ.

೨೦೧೩ರಲ್ಲೇ ಸರ್ಕಾರ ಈ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತಂದರೂ ಶಿಗ್ಗಾಂವಿ ಕ್ಷೇತ್ರದಲ್ಲಿ ಆರಂಭವಾಗಿಲ್ಲ. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಆಗಮಿಸಿದಾಗ, ಅಪೂರ್ಣಗೊಂಡಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೂ ಪೂರ್ಣಗೊಂಡಿಲ್ಲ.ಕ್ಯಾಂಟೀನ್ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಕಿಟಕಿಗಳು ಒಡೆದುಹೋಗಿದ್ದು, ದುರಸ್ತಿಯಾಗಿದೆ. ಸರಿಯಾದ ಬಾಗಿಲು ಇಲ್ಲದ ಕಾರಣ ಅನೈತಿಕ ಚಟುವಟಿಕೆ ತಾಣವಾಗಿತ್ತು. ಮದ್ಯದ ಬಾಟಲಿ, ಪ್ಲಾಸ್ಟಿಕ್ ಚೀಲಗಳಿಂದ ತುಂಬಿದ್ದ ಕ್ಯಾಂಟೀನ್ ಒಳಗೆ ಹಾಗೂ ಹೊರಗೆ ಸ್ವಚ್ಛ ಮಾಡಿ ಉದ್ಘಾಟನೆಗೆ ಸಜ್ಜುಗೊಳಿಸಲಾಗಿದೆ. ಆದರೆ ಕ್ಯಾಂಟೀನ್‌ ಯಾವಾಗ ಪ್ರಾರಂಭ ಆಗುತ್ತಿದೆ ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕ್ಯಾಂಟೀನ್ ಸುತ್ತ ಗಿಡಗಂಟಿ ಬೆಳೆದಿದೆ. ಪ್ರಯಾಣಿಕರು, ಸಾರ್ವಜನಿಕರು ಕ್ಯಾಂಟೀನ್ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ರೋಗ ಹರಡುವ ಭೀತಿ ಸ್ಥಳೀಯರಲ್ಲಿದೆ. ಕ್ಯಾಂಟೀನ್ ಸುತ್ತ ಹಾಗೂ ಇಡೀ ಬಸ್‌ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು. ಇಂದಿರಾ ಕ್ಯಾಂಟೀನ್ ಅನ್ನು ಶೀಘ್ರ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಇಂದಿರಾ ಕ್ಯಾಂಟೀನ್‌ಗೆ ವಿದ್ಯುತ್‌ ಸೇರಿ ಸಕಲ ವ್ಯವಸ್ಥೆ ಕಲ್ಪಿಸಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕ್ಯಾಂಟೀನ್‌ ಪ್ರಾರಂಭಿಸಿ ಬಡ ಕೂಲಿಕಾರರಿಗೆ ಅನುವು ಮಾಡಿಕೊಡಬೇಕು ಪುರಸಭೆ ನಾಮನಿರ್ದೇಶಿತ ಸದಸ್ಯ ಮಂಜುನಾಥ ಮಣ್ಣನವರ ಹೇಳಿದರು.