ಗರೀಬಿ ಹಠಾವೊ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಹೊಲದೊಡೆಯ ಮುಂತಾದ ಮಹತ್ವದ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಪ್ರಧಾನಿ ಭಾರತರತ್ನ ಇಂದಿರಾ ಗಾಂಧಿ ಅವರ ಕಾರ್ಯಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಶೇಖರ್ ಮಡಿವಾಳ್ ಹೇಳಿದರು.
ಕಾರ್ಕಳ : ಗರೀಬಿ ಹಠಾವೊ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಹೊಲದೊಡೆಯ ಮುಂತಾದ ಮಹತ್ವದ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಪ್ರಧಾನಿ ಭಾರತರತ್ನ ಇಂದಿರಾ ಗಾಂಧಿ ಅವರ ಕಾರ್ಯಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಶೇಖರ್ ಮಡಿವಾಳ್ ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರು ಹಾಗೂ ಜನಸಾಮಾನ್ಯರ ಪರವಾಗಿ ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರಗಳು ಮತ್ತು ಅಭಿವೃದ್ಧಿಪರ ಚಿಂತನೆಗಳು ಇಂದಿಗೂ ವಿವಿಧ ರೂಪಗಳಲ್ಲಿ ಮುಂದುವರಿದಿವೆ. ಅವರ ಜನಪರ ಆಡಳಿತ ಹಾಗೂ ಮಹಾನ್ ವ್ಯಕ್ತಿತ್ವ ಸದಾ ಸ್ಮರಣೀಯ ಎಂದರು.ನಿವೃತ್ತ ಉಪನ್ಯಾಸಕ ಹಾಗೂ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದೇವದಾಸ್ ಆರ್. ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಕೋಟ್ಯಂತರ ಜನರಿಗೆ ಭೂಮಿಯ ಹಕ್ಕು ನೀಡಿದ ಇಂದಿರಾ ಗಾಂಧಿ ನಮಗೆ ದೇವರ ಸಮಾನರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಗೌರವಗಳಿಗೆ ಪಾತ್ರರಾದ ಅವರ ಸಾಧನೆ ಸ್ಮರಣೀಯ ಎಂದರು.ಮಹಿಳಾ ಸಬಲೀಕರಣಕ್ಕೆ ಮಹತ್ವ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಮಹಿಳಾ ಸಬಲೀಕರಣಕ್ಕೆ ಮಹತ್ವ ದೊರೆಯಿತು. 20 ಅಂಶಗಳ ಕಾರ್ಯಕ್ರಮದ ಮೂಲಕ ಬಡವರಿಗೆ ಭೂಮಿ, ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನ ಮಾಡಿದರು. ಅವರ ಜನಪರ ನೀತಿಗಳಿಗೆ ವಿರೋಧ ವ್ಯಕ್ತವಾದದ್ದು ದುರಂತ. ಇಂದಿರಾ ಗಾಂಧಿ ಅವರ ಹತ್ಯೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ ಎಂದರು.
ಕೆಡಿಪಿ ನಾಮನಿರ್ದೇಶನ ಸದಸ್ಯ ಎಂ.ಪಿ. ಮೊಯಿದ್ದೀನ್ ಇನ್ನಾ ಸಂದರ್ಭೋಚಿತವಾಗಿ ಮಾತನಾಡಿದರು.ಸಭೆಯಲ್ಲಿ ಭೂ ನ್ಯಾಯಮಂಡಳಿ ಸದಸ್ಯ ಸುನೀಲ್ ಭಂಡಾರಿ, ಪುರಸಭೆ ಮಾಜಿ ಅಧ್ಯಕ್ಷೆ ರೆಹಮತ್, ಕೆಡಿಪಿ ಸದಸ್ಯ ರುಕ್ಮಯ ಶೆಟ್ಟಿಗಾರ್, ಗ್ಯಾರಂಟಿ ಸಮಿತಿ ಸದಸ್ಯರಾದ ವಿಶ್ವನಾಥ ಭಂಡಾರಿ, ಸಂತೋಷ್ ದೇವಾಡಿಗ, ಹೇಮಂತ್ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಮಹಿಳಾ ಪದಾಧಿಕಾರಿಗಳಾದ ಶೋಭಾ ಪ್ರಸಾದ್, ಕಾಂತಿ ಅಧ್ಯಕ್ಷೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನಗರ ಮಹಿಳಾ ಅಧ್ಯಕ್ಷೆ ರೀನಾ ಜೂಲಿಯೆಟ್ ಸ್ವಾಗತಿಸಿದರು. ಬ್ಲಾಕ್ ಕಾರ್ಯದರ್ಶಿ ಜೋಕಿಂ ಪಿಂಟೋ ವಂದಿಸಿದರು.