ಇಂದಿರಾ ವಸತಿ ಶಾಲೆ ಸಿಎಂ ಸಿದ್ದು ಕನಸಿನ ಕೂಸು: ಶಾಸಕ ಭೀಮಸೇನ ಚಿಮ್ಮನಕಟ್ಟಿ

| Published : Feb 01 2025, 12:03 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ಬಾದಾಮಿ ಮತಕ್ಷೇತ್ರದ ಶಾಸಕರಾಗಿದ್ದಾಗ ಇಂದಿರಾ ಗಾಂಧಿ ವಸತಿ ಶಾಲೆ ಅವರ ಕನಸಿನ ಕೂಸಾಗಿತ್ತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ಬಾದಾಮಿ ಮತಕ್ಷೇತ್ರದ ಶಾಸಕರಾಗಿದ್ದಾಗ ಇಂದಿರಾ ಗಾಂಧಿ ವಸತಿ ಶಾಲೆ ಅವರ ಕನಸಿನ ಕೂಸಾಗಿತ್ತು. ಇದರ ನಿರ್ಮಾಣಕ್ಕೆ ಅಂದೇ ಅವರು ಅಡಿಗಲ್ಲು ಹಾಕಿದ್ದು, ಅವರ ಕನಸು ಇಂದು ನನಸಾಗಿದೆ. ಇದರಲ್ಲಿ ನನಗಿಂತ ಅವರ ಪಾತ್ರ ತುಂಬಾ ಇದೆ. ಅವರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ತಾಲೂಕಿನ ಹಾನಾಪೂರ ಎಸ್.ಪಿ.ಗ್ರಾಪಂ ವ್ಯಾಪ್ತಿಯ ಮುರುಡಿ ಸರ್ವೇ ನಂ.77ರಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ(574)ಯ ನೂತನ ಕಟ್ಟಡದ ಉದ್ಘಾಟನೆ ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಈ ಶಾಲೆಗಾಗಿ ಪಾಲಕರ ಬಹುದಿನಗಳ ಬೇಡಿಕೆಯಾಗಿತ್ತು. ಈಗ ಅದು ನನಸಾಗಿದೆ. ಅಂದು ನಾನು ನವೋದಯ ಶಾಲೆಯಲ್ಲಿ ಕಲಿಯುವಾಗ ಇಷ್ಟೊಂದು ಸೌಕರ್ಯಗಳಿರಲಿಲ್ಲ. ಆದರೆ ಈಗ ಸಾಕಷ್ಟು ಸೌಕರ್ಯಗಳಿವೆ ಎಂದು ತಿಳಿಸಿದರು.

ನಾನು ಸಚಿವನ ಮಗನಾಗಿದ್ದರೂ ನನಗೆ ನವೋದಯ ಶಾಲೆಯಲ್ಲಿ ಯಾವ ಪ್ರತ್ಯೇಕ ಸೌಲಭ್ಯಗಳಿರಲಿಲ್ಲ. ಎಲ್ಲರಂತೆ ನಮ್ಮ ಕೆಲಸ ನಾವೇ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳ ಜೊತೆ ಸಮಾನವಾಗಿ ಕಲಿತೆ. ನನ್ನ ಕಷ್ಟ ನೋಡಿದ ನಮ್ಮ ತಂದೆ ಶಿಕ್ಷಣ ಮೊಟಕುಗೊಳಿಸಿ ಮನೆಗೆ ಬರಲು ಹೇಳಿದರೆ ನಮ್ಮ ತಾಯಿ ಕಷ್ಟವಿದ್ದರೂ ಸಹಿಸಿಕೊಂಡು ಕಲಿ ಎಂದು ನನ್ನಲ್ಲಿ ಧೈರ್ಯ ತುಂಬಿದರು. ನನಗೆ ಬಡತನ ಹಾಗೂ ಸಿರಿತನ ಎರಡರ ಅನುಭವವಿದೆ. ಹಿಂದುಳಿದ ಜಾತಿ, ಜನಾಂಗದ ಬಡ ಮಕ್ಕಳು, ಪ್ರತಿಭಾವಂತರು ಉನ್ನತ ಹುದ್ದೆ ಪಡೆಯಲು ಎಲ್ಲ ಅವಕಾಶಗಳನ್ನು ಒದಗಿಸಿಕೊಟ್ಟ ಡಾ.ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ಎಲ್ಗರೂ ಸ್ಮರಿಸಲೇ ಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಾದ ತಮಗೆ ಬಡತನದ ಅರಿವು ಬೇಕು. ಶಿಕ್ಷಕರ ಮೇಲೆ ಗೌರವ ಇರಬೇಕು. ಪಾಲಕರು ಶಿಕ್ಷಕರ ಮೇಲೆ ನಂಬಿಕೆ, ಗೌರವವಿಟ್ಟಾಗ ಶಿಕ್ಷಣ ಮಕ್ಕಳಲ್ಲಿ ಚನ್ನಾಗಿ ಅಂತರ್ಗತವಾಗಲು ಸಾಧ್ಯ. ಶಿಕ್ಷಕರ ಪರಿಶ್ರಮ ತುಂಬಾ ಇದೆ. ನನಗೆ ಕಲಿಸಿದ ಗುರುಗಳನ್ನು ನಾನು ಇಂದಿಗೂ ಸ್ಮರಿಸುತ್ತೇನೆ. ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳಬೇಕು. ಪಾಲಕರೇ ನಿಮ್ಮ ಮಕ್ಕಳಿಗೆ ಈ ಶಾಲೆಯಲ್ಲಿ ಒಳ್ಳೆಯ ಅವಕಾಶ ದೊರಕಿದೆ. ಅದಕ್ಕೆ ಹೆಮ್ಮೆಪಡಿ. ಅವರಿಗೆ ಸರಿಯಾಗಿ ಓದಲು ಹೇಳಿ. ಶಾಲೆಯ ಈ ಸುಂದರ ಪರಿಸರವನ್ನು ವಿದ್ಯಾರ್ಥಿಗಳೇ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿ ಶುಭ ಹಾರೈಸಿದರು.

ಬಾಗಲಕೋಟೆ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶಾಸಕರು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಮತ್ತಷ್ಟು ಉತ್ತೇಜನ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ವಿಕ್ರಮ ಜಾಧವ ಹಾಗೂ ಕಟ್ಟಡ ನಿರ್ಮಾಣದಲ್ಲಿ ಶ್ರಮವಹಿಸಿ ಮಹನೀಯರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ತಹಸೀಲ್ದಾರ್‌ ಮಂಗಳಾ ಎಂ, ಹಾನಾಪೂರ ಎಸ್.ಪಿ. ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ, ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಎಇಇ ಡಾ.ವಿ.ನಟರಾಜ, ಕೆಎಂಎಫ್ ಅಧ್ಯಕ್ಷ ಈರಣ್ಣ ಕರಿಗೌಡ್ರ, ಬಾದಾಮಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಂ.ಮಳಿಮಠ, ಹೆಸ್ಕಾಂ ಮುಖ್ಯ ಅಭಿಯಂತರ ಪ್ರಕಾಶ ಪೂಚಗುಂಡಿ, ಲಕ್ಷ್ಮಣ ಬಿರಾದಾರ, ಕಾಂಗ್ರೆಸ್ ಮುಖಂಡರಾದ ವೈ.ಆರ್.ಹೆಬ್ಬಳ್ಳಿ, ಎಸ್.ಎಂ.ಪಾಟೀಲ, ರಂಗನಾಥ ಮೊಕಾಶಿ, ರಾಜು ಹೆಬ್ಬಳ್ಳಿ ಸೇರಿದಂತೆ ಇನ್ನೂ ಅನೇಕರು ಇದ್ದರು.

-----

ಕೋಟ್‌...

9.20 ಎಕರೆ ವಿಶಾಲವಾದ ಭೂಮಿಯಲ್ಲಿ ಈ ಭವ್ಯವಾದ ಕಟ್ಟಡಗಳು ₹22.40 ಕೋಟಿ ಅನುದಾನದಲ್ಲಿ ಈ ವಸತಿ ಶಾಲೆ ನಿರ್ಮಾಣವಾಗಿದೆ. 125 ಗಂಡು ಮತ್ತು 125 ಹೆಣ್ಣು ಮಕ್ಕಳು ಒಟ್ಟು 250 ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಲಿದ್ದಾರೆ. ಪ್ರಾಚಾರ್ಯರಿಗೆ, ಸಿಬ್ಬಂದಿಗೆ 13 ಸುಸಜ್ಜಿತ ಮನೆಗಳ ನಿರ್ಮಾಣ ಕೂಡ ಮಾಡಲಾಗಿದೆ.

- ಸದಾಶಿವ ಬಡಿಗೇರ, ಬಾಗಲಕೋಟೆ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ