ಸಾರಾಂಶ
ಬ್ಯಾಡಗಿ: ಕಾನೂನುಗಳ ರಕ್ಷಣೆ, ಪಾಲನೆ ಸೇರಿದಂತೆ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಇದನ್ನು ಅರ್ಥೈಸಿಕೊಂಡು ನಡೆಯುವ ವ್ಯಕ್ತಿಗಳು ದೇಶಕ್ಕೆ ಅಥವಾ ಸಮಾಜಕ್ಕೆ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮೋಟೆಬೆನ್ನೂರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾಯಂ ಲೋಕ ಅದಾಲತ್ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನು ಪರಿಪಾಲನೆ ವಿಷಯದಲ್ಲಿ ಯಾರೂ ಹಿಂದೆ ಬೀಳಬಾರದು, ಒಂದು ವೇಳೆ ಕಾನೂನಿನ ಮುನ್ನ ಇಂತಹದ್ದೊಂದು ಪಾಪಪ್ರಜ್ಞೆ ಕಾಡಬೇಕಾಗುತ್ತದೆ, ಒಂದು ವೇಳೆ ಕಾನೂನಿನ ಸಂಪೂರ್ಣ ಅರಿವು ಇರುವುದಿಲ್ಲ ಎಂದಾದಲ್ಲಿ ಸಂಬಂಧಿಸಿದ ನ್ಯಾಯಾಲಯಗಳಲ್ಲಿ ಕಾನೂನು ಸೇವೆಗಳ ಸಮಿತಿಯಿಂದ ಸಿಗುವಂತಹ ಉಚಿತ ಕಾನೂನು ಸಲಹೆಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.ಶಿಕ್ಷೆ ಪಡೆದವರಿಗೆ ಗೌರವವಿಲ್ಲ: ಕಿರಿಯ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ ಮಾತನಾಡಿ, ಕಾನೂನು ಗೌರವಿಸುವುದು ದೇವರ ಸ್ಮರಣೆ ಮಾಡಿದಷ್ಟೇ ಸಮನಾದ ಪ್ರಕ್ರಿಯೆ ಹೀಗಾಗಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕು ಶಿಕ್ಷೆ ಪಡೆದುಕೊಂಡವರು ಸಮಾಜದಲ್ಲಿ ಎಂದಿಗೂ ಗೌರವ ಪಡೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಹೈ ಪ್ರೊಫೈಲ್ ಅಪರಾಧಿಗಳು ಜಾಮೀನು ಪಡೆದ ತಕ್ಷಣವೇ ಮೆರವಣಿಗೆ ನಡೆಸಿ ಸಂಭ್ರಮಿಸುವುದು ಎಷ್ಟರಮಟ್ಟಿಗೆ ಸರಿ? ಇಂತಹ ವಿಷಯಗಳ ಕುರಿತು ನಾವೆಲ್ಲರೂ ಆತ್ಮಾಲೋಕನೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಪರ ಸರ್ಕಾರಿ ವಕೀಲ ಪ್ರಭು ಶೀಗಿಹಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳಗುಂದ, ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ಸದಸ್ಯರಾದ ಭಾರತಿ ಕುಲ್ಕರ್ಣಿ, ಬಸವರಾಜ ಬಳ್ಳಾರಿ, ಜಿ.ಎನ್. ಹುಚ್ಚೇರ, ಎಂ.ಎನ್. ಕೆಂಗೊಂಡ, ರಾಜೀವ ಶಿಗ್ಲಿ, ಶಂಕರ ಬಾರ್ಕಿ, ಮೃತ್ಯುಂಜಯ ಲಕ್ಕಣ್ಣನವರ, ನಿಂಗಪ್ಪ ಮೋಟೆಬೆನ್ನೂರ, ಸಿ.ಸಿ.ದಾನಣ್ಣವರ, ಸೋಮಪ್ಪ ಮೂಡೂರ, ಎಂ.ಬಿ. ಬಳಿಗಾರ, ಎಸ್.ಕೆ. ಯತ್ನಳ್ಳಿ, ಶಂಕ್ರಪ್ಪ ನಾಯಕ, ಅರುಣಕುಮಾರ ಹಿತ್ತಲಮನಿ, ಕರಬಸಪ್ಪ ಶಿಗ್ಗಾಂವಿ ಗ್ರಾಪಂ.ಪಿಡಿಓ ಮಲ್ಲೇಶ ಮೋಟೆನವರ ಸೇರಿದಂತೆ ವಕೀಲರ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.