ಹೊಸಕೋಟೆ: ಹತ್ತು ಹಲವು ಕಾರ್ಯಕ್ರಮ ಮಾಡುವುವ ಬದಲು ಒಂದೇ ಒಂದು ಜನೋಪಕಾರಿ ಕೆಲಸ ಮಾಡಿದರೂ ಸಾಕು ಎಂದು ಜಿಲ್ಲಾ ಅನುಸ್ಥಾಪನಾ ಅಧಿಕಾರಿ ಕುಮಾರಸ್ವಾಮಿ ಹೇಳಿದರು

ಹೊಸಕೋಟೆ: ಹತ್ತು ಹಲವು ಕಾರ್ಯಕ್ರಮ ಮಾಡುವುವ ಬದಲು ಒಂದೇ ಒಂದು ಜನೋಪಕಾರಿ ಕೆಲಸ ಮಾಡಿದರೂ ಸಾಕು ಎಂದು ಜಿಲ್ಲಾ ಅನುಸ್ಥಾಪನಾ ಅಧಿಕಾರಿ ಕುಮಾರಸ್ವಾಮಿ ಹೇಳಿದರು.

ರೋಟರಿ ಹೊಸಕೋಟೆ ಸೆಂಟ್ರಲ್ ಕ್ಲಬ್‌ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷರು, ಪದಾಧಿಕಾರಿಗಳು ಇದೊಂದು ಹುದ್ದೆ ಎನ್ನುವುದಕ್ಕಿಂತ ಸೇವೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ರೋಟರಿ ಸೇವೆ ಈಗ ನಮಗೆ ಬದುಕಾಗಿ ಮಾರ್ಪಟ್ಟಿದೆ. ತಾಲೂಕಿನ ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮತ್ತು ಯುವ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ಗ್ರಾಮದಲ್ಲೂ ಕಡುಬಡವರನ್ನು ಗುರುತಿಸಿ ಗ್ರಾಮಕ್ಕೆ ಒಬ್ಬರಂತೆ ಹಸು ವಿತರಣೆ ಮಾಡುವ ಆಶಯ ಹೊಂದಲಾಗಿದೆ ಎಂದರು.

ಡಿವೈಎಸ್ಪಿ ಮಲ್ಲೇಶ್ ಮಾತನಾಡಿ, ರೋಟರಿ ಸಂಸ್ಥೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಬಡವರ ಪರ ಕೆಲಸ ಮಾಡುವ ಪಾರದರ್ಶಕ ಸಂಸ್ಥೆಯಾಗಿದೆ. ನಗರದ ವಾಹನ ದಟ್ಟಣೆ ನಿವಾರಣೆಗೆ ದಾನಿಗಳ ಸಹಾಯದಲ್ಲಿ ಸುಮಾರು 2.5 ಕೋಟಿ ವೆಚ್ಚದ ಠಾಣೆಯಲ್ಲೇ ಕೂತು ನಗರದ 50 ಕಡೆ ಚಲನವಲನ ಗಮನಿಸುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯುಳ್ಳ 360 ಡಿಗ್ರಿಯಲ್ಲೂ ಸೆರೆ ಹಿಡಿಯಬಲ್ಲ ಕ್ಯಾಮರಾ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಇದರಿಂದ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದರು.

ನೂತನ ಪದಾಧಿಕಾರಿಗಳು:

ಕಾರ್ಯದರ್ಶಿಯಾಗಿ ಬಚ್ಚಣ್ಣ, ನಿರ್ದೇಶಕರಾಗಿ ವೆಂಕಟೇಶ್, ಮುನಿರಾಜು, ಎ.ಜಿ.ನಾಗರಾಜ್, ಲಕ್ಷ್ಮಣ್‌ಗೌಡ, ಕೊಳತೂರು ಚಿಕ್ಕೇಗೌಡ, ರಶ್ಮಿಗೌಡ, ಕೆ.ನಿರ್ಮಲ, ಆರ್‌ಟಿಸಿ ಗೋವಿಂದ್‌ರಾಜ್, ಸತೀಶ್, ಗೌರವ ಸದಸ್ಯರಾಗಿ ಕೃಷ್ಣಮೂರ್ತಿ, ಗೌತಮ್ ಪದಗ್ರಹಣ ಮಾಡಿದರು.

ಇದೇ ವೇಳೆ ಮುಂದಿನ ವರ್ಷಕ್ಕೆ ಶೋಭಾ ಲಕ್ಷ್ಮಣ್ ಅವರನ್ನು ಮೊದಲ ಮಹಿಳಾ ಅಧ್ಯಕ್ಷರೆಂದು ಘೋಷಸಲಾಯಿತು. ನಗರದಲ್ಲಿ ಪೊಲೀಸ್ ಇಲಾಖೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ರೋಟರಿ ವತಿಯಿಂದ 5 ಲಕ್ಷ ರು. ದೇಣಿಗೆ ನೀಡುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ವಲಯ ಅಧ್ಯಕ್ಷರಾದ ರಾಮಚಂದ್ರಪ್ಪ, ಕೋಲಾರ ಮತ್ತು ತಿರುಪತಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ರಾಜಕುಮಾರ್, ಸಹಾಯಕ ರಾಜ್ಯಪಾಲ ಶಿವಕುಮಾರ್, ಕಾಮಧೇನು ಅಧ್ಯಕರಾದ ಎಂ.ಎಂ.ಲಕ್ಷ್ಮಿನಾರಾಯಣ, ರೋಟರಿ ಸೆಂಟ್ರಲ್ ಜಿಲ್ಲಾ ಕಾರ್ಯದರ್ಶಿ ಡಾ. ರಾಜಕುಮಾರ್, ನಿಕಟಪೂರ್ವ ಅಧ್ಯಕ್ಷ ಕೆ.ವಿ.ಸುಬ್ರಮಣಿ, ಮಾಜಿ ಅಧ್ಯಕ್ಷ ಲಕ್ಷ್ಮಣ್ ಗೌಡ ಇತರರು ಹಾಜರಿದ್ದರು.

ಫೋಟೋ: 9 ಹೆಚ್‌ಎಸ್‌ಕೆ 2

ಹೊಸಕೋಟೆ ರೋಟರಿ ಸೆಂಟ್ರಲ್ 2026-27ನೇ ಸಾಲಿನ ಅಧ್ಯಕ್ಷರಾಗಿ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿ.ವಿಜಯ್ ಕುಮಾರ್ ಪದಗ್ರಹಣ ಮಾಡಿದರು. ಜಿಲ್ಲಾ ಅನುಸ್ಥಾಪನಾ ಅಧಿಕಾರಿ ಕುಮಾರಸ್ವಾಮಿ, ವಲಯ ಅಧ್ಯಕ್ಷರಾದ ರಾಮಚಂದ್ರಪ್ಪ ಇತರರಿದ್ದರು.