ನಿರ್ವಹಣೆ ಕೊರತೆಯಿಂದ ಹಾಳಾತು ಗಾಮನಗಟ್ಟಿ ಕೈಗಾರಿಕೆ ವಲಯ

| Published : May 16 2025, 01:58 AM IST

ನಿರ್ವಹಣೆ ಕೊರತೆಯಿಂದ ಹಾಳಾತು ಗಾಮನಗಟ್ಟಿ ಕೈಗಾರಿಕೆ ವಲಯ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಕೈಗಾರಿಕೆ ಪ್ರದೇಶದಂತೆ ಗಾಮನಗಟ್ಟಿಯಲ್ಲಿ 560 ಎಕರೆ ಪ್ರದೇಶದಲ್ಲಿ 2008ರಲ್ಲಿ ಕೈಗಾರಿಕೆ ವಲಯವನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಸಲ ಕೈಗಾರಿಕೆ ವಲಯವನ್ನು ನೀವು ನೋಡಿದರೆ ವಾವ್ಹ್ ಎನ್ನುತ್ತೀರಿ, ಆದರೆ ಈ ಕೈಗಾರಿಕೆ ಪ್ರದೇಶಕ್ಕೆ ಹುಬ್ಬಳ್ಳಿಯಿಂದ ಸಂಪರ್ಕ ಕಲ್ಪಿಸುವ ಸರಿಯಾದ ರಸ್ತೆಯೇ ಇಲ್ಲ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಇಲ್ಲಿಯ ಹೊರವಲಯದಲ್ಲಿ ಇರುವ ಗಾಮನಗಟ್ಟಿ ಕೈಗಾರಿಕೆ ಪ್ರದೇಶ ವಿಶಾಲ ರಸ್ತೆಗಳು, ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿದ್ದು, ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿ ಮತ್ತು ಹೆಸ್ಕಾಂ ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗುತ್ತಿದೆ.

ಬೇಲೂರು ಕೈಗಾರಿಕೆ ಪ್ರದೇಶದಂತೆ ಗಾಮನಗಟ್ಟಿಯಲ್ಲಿ 560 ಎಕರೆ ಪ್ರದೇಶದಲ್ಲಿ 2008ರಲ್ಲಿ ಕೈಗಾರಿಕೆ ವಲಯವನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಸಲ ಕೈಗಾರಿಕೆ ವಲಯವನ್ನು ನೀವು ನೋಡಿದರೆ ವಾವ್ಹ್ ಎನ್ನುತ್ತೀರಿ, ಆದರೆ ಈ ಕೈಗಾರಿಕೆ ಪ್ರದೇಶಕ್ಕೆ ಹುಬ್ಬಳ್ಳಿಯಿಂದ ಸಂಪರ್ಕ ಕಲ್ಪಿಸುವ ಸರಿಯಾದ ರಸ್ತೆಯೇ ಇಲ್ಲ. ಗಾಮನಗಟ್ಟಿಗೆ ತೆರಳುವ ಹಳ್ಳಿಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸಬೇಕಾಗಿದೆ.

ಧಾರವಾಡ ಕಡೆಯಿಂದ ಆಗಮಿಸುವವರಿಗೆ ನವನಗರದ ಹತ್ತಿರ ಹಾಗೂ ಹುಬ್ಬಳ್ಳಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ಬಳಿ ಡಬಲ್‌ ರಸ್ತೆ ಮಾಡಬೇಕು ಎಂಬುದು ದಶಕದ ಬೇಡಿಕೆಯಾಗಿದೆ. ಆದರೆ ಸ್ಪಂದನೆ ಸಿಕ್ಕಿಲ್ಲ. ರಸ್ತೆ ಇಲ್ಲದೇ ಬೇಸತ್ತು ಕೈಗಾರಿಕೆ ಸಂಘದ ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ಗಾಮನಗಟ್ಟಿಗೆ ತೆರಳುವ ರಸ್ತೆಯನ್ನೇ ಲೋಕೋಪಯೋಗಿ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.

ನೂತನ ರಸ್ತೆ 15ರಿಂದ 20 ಟನ್‌ ಭಾರ ಹೊರುವ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಆದರೆ ಗಾಮನಗಟ್ಟಿ ಕೈಗಾರಿಕೆ ವಲಯದಿಂದ ನಿತ್ಯ 60ರಿಂದ 80 ಟನ್‌ ಸಾಮರ್ಥ್ಯದ ಸರಕು ಸಾಗಿಸುವ ವಾಹನಗಳು ಸಂಚರಿಸುತ್ತಿದ್ದು, ಡಬಲ್‌ ರಸ್ತೆ ಇಲ್ಲದಿರುವುದಕ್ಕೆ ತೀವ್ರ ಸಮಸ್ಯೆಯಾಗಿದೆ.

ರಸ್ತೆ ಸಂಪರ್ಕವಿಲ್ಲದಿರುವುದರಿಂದ ಇಲ್ಲಿ ಜನ ಸಂಚಾರವೇ ಬೆಳೆದಿಲ್ಲ. ಸಂಜೆ 7 ಗಂಟೆಯಾದರೆ ಸಾಕು ಇಲ್ಲಿ ಯಾರೂ ಇರುವುದಿಲ್ಲ. ಬಸ್‌ ಸಂಚಾರವೂ ಸರಿಯಾಗಿ ಇಲ್ಲದ್ದರಿಂದ ಕಾರ್ಮಿಕರನ್ನು ಕರೆದುಕೊಂಡು ಬರಲು ಕಂಪನಿಯವರೇ ವಾಹನಗಳ ಸೌಕರ್ಯ ಕಲ್ಪಿಸಿದ್ದಾರೆ.

ಬಸ್‌ ಸೌಕರ್ಯ ಕಲ್ಪಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಒತ್ತಾಯಕ್ಕೆ ಬಸ್‌ ಬಿಡಲಾಯಿತು. ಆದರೆ ಸ್ವಲ್ಪ ದಿನಗಳಲ್ಲೇ ಕೈಗಾರಿಕೆ ವಲಯದ ಮಾರ್ಗದಲ್ಲಿ ಕಲೆಕ್ಷನ್‌ ಆಗುವುದಿಲ್ಲ ಎಂದು ಬಸ್‌ ಬಂದ್‌ ಆಗಿವೆ. ನಿತ್ಯ ಇಲ್ಲಿಗೆ 7-8 ಸಾವಿರ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದು, ಬೈಕ್‌ ಒಯ್ಯಬೇಕು ಇಲ್ಲವೇ ಕಂಪನಿ ವಾಹನದಲ್ಲೇ ತೆರಳಬೇಕು ಅಂಥ ಪರಿಸ್ಥಿತಿಯನ್ನು ಕಾರ್ಮಿಕರು ಎದುರಿಸಬೇಕಾಗಿದೆ.

ಪೈಪ್‌ಲೈನ್‌ ಇದೆ ನೀರಿಲ್ಲ: ಕುಡಿಯುವ ನೀರಿನ ಸಮಸ್ಯೆ ಇಲ್ಲಿ ತೀವ್ರವಾಗಿದೆ. ಕಾರ್ಮಿಕರಿಗೆ ಕುಡಿಯಲು ನಗರದಿಂದಲೇ ಶುದ್ಧ ಕುಡಿಯುವ ನೀರು ತಂದು ಕೊಡುತ್ತಿದ್ದೇವೆ. ನೀರು ಬಳಕೆಗಾಗಿ ಪ್ರತಿಯೊಂದು ಕಾರ್ಖಾನೆಯಲ್ಲಿ ಕೊಳವೆಬಾವಿಯನ್ನು ಹಾಕಿಸಿಕೊಂಡಿದ್ದೇವೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ಕೋಟ್ಯಂತರ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾಕಿ ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅದರಲ್ಲಿ ನೀರೇ ಹರಿದಿಲ್ಲ. ನೀರಿಗಾಗಿ 8-9 ಕೊಳವೆಬಾವಿಗಳನ್ನು ಹಾಕಲಾಗಿದೆ. ಅವೆಲ್ಲಾ ಬಂದ್‌ ಆಗಿವೆ.

ಇಡೀ ಕೈಗಾರಿಕೆ ವಲಯದಲ್ಲಿ ಬೀದಿ ದೀಪಗಳ ನಿರ್ವಹಣೆ ಕೆಐಎಡಿಬಿ ಮಾಡುತ್ತಿದೆ. ಆದರೆ ರಾತ್ರಿ ಹೊತ್ತು ಬೀದಿ ದೀಪಗಳು ಬೆಳಗಿದ ಉದಾಹರಣೆಯೇ ಇಲ್ಲ. ಹೀಗಾಗಿ ಇಲ್ಲಿ ರಾತ್ರಿ ಹೊತ್ತು ಅಡ್ಡಾಡುವುದು ದುಸ್ತರವಾಗಿದೆ. ಪೊಲೀಸ್‌ ಗಸ್ತು ವ್ಯವಸ್ಥೆ ಕಲ್ಪಿಸುವಂತೆ ಪೊಲೀಸರಿಗೆ ಮನವಿ ಕೊಟ್ಟಿದ್ದೇವೆ. ಶಾಸಕ ಬೆಲ್ಲದ ಸಹ ಪೊಲೀಸರಿಗೆ ಫೋನ್‌ ಮಾಡಿ ಹೇಳಿದ್ದಾರೆ. ಆದರೂ ಪೊಲೀಸ್‌ ಗಸ್ತು ತಿರುಗುವ ವ್ಯವಸ್ಥೆ ಆರಂಭಿಸಿಲ್ಲ. ರಾತ್ರಿ ವೇಳೆ ಕಳ್ಳತನಗಳು ಆಗಿವೆ. ನಮ್ಮ ಕೈಗಾರಿಕೆ ಶೆಡ್‌ಗಳ ಕುರಿತು ಆತಂಕವಿದ್ದು, ಬೆಳಗ್ಗೆ ನಾವು ಹೋದಾಗಲೇ ಅದರ ಸುರಕ್ಷತೆ ಬಗ್ಗೆ ತಿಳಿದಿರುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯವರು ಕೈಗಾರಿಕೆ ವಲಯದ ಎಲ್ಲ ಕಡೆ ಅಂಡರ್‌ಗ್ರೌಂಡ್ ಕೇಬಲ್‌ ಅಳವಡಿಸಿದ್ದಾರೆ. ಆದರೆ ಟಾನ್ಸಫಾರ್ಮರ್‌, ಡಿಬಿ ಬ್ಯಾಕ್ಸ್‌ ಗುಣಮಟ್ಟದಿಂದ ಕೊಡಿಲ್ಲ. ಹೀಗಾಗಿ ಇಲ್ಲಿ ವಿದ್ಯುತ್‌ ಹೋಗಿದ್ದೇ ಹೆಚ್ಚು. ಯಾವಾಗಲಾದರೊಮ್ಮೆ ಸಿಬ್ಬಂದಿ ತಾತ್ಕಾಲಿಕ ದುರಸ್ತಿ ಮಾಡುತ್ತಾರೆ. ಆದರೆ ಬಾಳಿಕೆ ಅ‍ವಧಿಯೇ ಕಡಿಮೆಯಾಗಿದೆ.

ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲ: ಕೈಗಾರಿಕೆ ವಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕವೇ ಇಲ್ಲ. ಮೇಲಾಗಿ ಕಸ ಹಾಕಲು ಸ್ಥಳವನ್ನೇ ನಿಗದಿಗೊಳಿಸಿಲ್ಲ. ಬೋರ್ಡ್‌ ಹಾಕಿ ಕಸ ಚೆಲ್ಲಲು ಜಾಗ ನಿಗದಿಗೊಳಿಸುವಂತೆ ಹಲವಾರು ಬಾರಿ ಉದ್ಯಮಿಗಳು ಕೋರಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿ ಸುಡುವುದು ಕಂಡು ಬರುತ್ತಿದೆ. ಕಸದ ಹೊಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ.

ಕೈಗಾರಿಕೆ ವಲಯದಲ್ಲೇ ಕೆಐಎಡಿಬಿ ನಾಗರಿಕ ವಸತಿ ನಿವೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎರಡ್ಮೂರು ಮಹಡಿಯ ಅಪಾರ್ಟ್‌ಮೆಂಟ್‌ಗಳನ್ನು ಸಹ ಕಟ್ಟಿಸಲಾಗಿದೆ. ಅಲ್ಲಿ ಸಣ್ಣ ರೂಂಗಳ ಆಕಾರದಲ್ಲಿದ್ದು, ನಾಗರಿಕ ವಸತಿಯೇ ಇಲ್ಲಿ ಬೆಳೆದು ಬರದಿರುವುದರಿಂದ ಅವನ್ನು ಯಾರೂ ಖರೀದಿಸಿಲ್ಲ. ವರ್ಷಗಳು ಗತಿಸಿ ಅವೆಲ್ಲ ಹಾಳಾಗಿ ಹೋಗಿವೆ.

ಸೌಕರ್ಯ ಕಲ್ಪಿಸುವುದು ವಿಳಂಬವಾಗಿರುವುದಕ್ಕೆ ನಮ್ಮ ನಿರ್ಲಕ್ಷ್ಯವೂ ಕಾರಣವಾಗಿದೆ.ಎರಡು ತಿಂಗಳ ಹಿಂದೆ ಕೈಗಾರಿಕೋದ್ಯಮಿಗಳು ಸೇರಿ ಸಂಘ ಕಟ್ಟಿಕೊಂಡಿದ್ದು, ಈಗ ಸೌಕರ್ಯ ಕಲ್ಪಿಸಲು ಹೋರಾಟ ಮಾಡುತ್ತೀದ್ದೇವೆ. ದುಡ್ಡು ತುಂಬಿ ಪ್ಲಾಟ್‌ ತೆಗೆದುಕೊಂಡ ತಪ್ಪಿಗೆ ನಾವು ಇಂಡಸ್ಟ್ರಿ ಮಾಡಬೇಕಾಯಿತು ಎಂದು ಗ್ರೀನ್‌ಟೆಕ್‌ ಇಂಡಸ್ಟ್ರಿಯಲ್ ಪಾರ್ಕ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಎಸ್‌.ಡಿ. ಭಟ್‌ ಹೇಳಿದರು.