ಕೈಗಾರಿಕೆ ಸ್ಥಾಪನೆ ಬೇಡವೇ ಬೇಡ: ಪ್ರತಿಭಟನೆ

| Published : Feb 18 2025, 12:30 AM IST

ಕೈಗಾರಿಕೆ ಸ್ಥಾಪನೆ ಬೇಡವೇ ಬೇಡ: ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿ ನೂರಾರು ಕಾರ್ಖಾನೆಗಳು ಸ್ಥಾಪಿತಗೊಂಡು ದಶಕಗಳು ಕಳೆದಿವೆ. ಈ ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನಜೀವನ, ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ.

ಕೊಪ್ಪಳ:

ತಾಲೂಕಿನಲ್ಲಿ ಎಂಎಸ್‌ಪಿಎಲ್ (ಬಿಎಸ್‌ಪಿಎಲ್) ಕಾರ್ಖಾನೆ ವಿಸ್ತರಣೆಯ ಹಂತದಲ್ಲಿ ಮತ್ತೊಂದು ಬೃಹತ್ ಕಾರ್ಖಾನೆ ಆರಂಭಿಸಲು ಹೊರಟಿರುವ ಸರ್ಕಾರದ ನಡೆ ವಿರೋಧಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಡಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಕೊಪ್ಪಳ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿ ನೂರಾರು ಕಾರ್ಖಾನೆಗಳು ಸ್ಥಾಪಿತಗೊಂಡು ದಶಕಗಳು ಕಳೆದಿವೆ. ಈ ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನಜೀವನ, ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ವಿಶೇಷವಾಗಿ ಜನರ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದ್ದು, ರೈತರ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದರು.

ಇಷ್ಟಾದರೂ ಮತ್ತೆ ಎಂಎಸ್‌ಪಿಎಲ್ (ಬಿಎಸ್‌ಪಿಎಲ್) ಕಾರ್ಖಾನೆಯು ವಿಸ್ತರಣೆಯ ಹಂತದಲ್ಲಿ ಮತ್ತೊಂದು ಬೃಹತ್ ಮಟ್ಟದ ಕಾರ್ಖಾನೆಯನ್ನು ನಿರ್ಮಿಸಲು ಹೊರಟಿರುವುದನ್ನು ಖಂಡನಾರ್ಹ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ಎದರಾಗಬಹುದು. ಜತೆಗೆ ಈಗಾಗಲೇ ಇರುವ ಕಾರ್ಖಾನೆಗಳಿಗೂ ಯಾವುದೇ ವಿಸ್ತರಣೆಗೆ ಅನುಮತಿಯನ್ನು ಸರ್ಕಾರ ನೀಡಬಾರದು ಎಂದು ಒತ್ತಾಯಿಸಿದರು.

ಸಾಮಾನ್ಯವಾಗಿ ಜನವಸತಿ ಪ್ರದೇಶದ ವ್ಯಾಪ್ತಿಯಲ್ಲಿ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಅವಕಾಶವಿಲ್ಲ. ಈ ಬೃಹತ್ ಕಾರ್ಖಾನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು, ಜಿಲ್ಲಾಡಳಿತ ಭವನ, ಅಗ್ನಿಶಾಮಕ ಕಚೇರಿ ಹಾಗೂ ಹಲವು ಸರ್ಕಾರಿ ಕಚೇರಿಗಳ ಕೂಗಳತೆಯ ದೂರದಲ್ಲಿದೆ. ಕಾರ್ಖಾನೆಗಳು ಸ್ಥಾಪನೆ ಹಾಗೂ ವಿಸ್ತರಣೆಗೆ ಸಾಕಷ್ಟು ವ್ಯತಿರಿಕ್ತವಾದ ವಿರೋಧಗಳಿದ್ದು, ಈ ಕೂಡಲೇ ಸರ್ಕಾರಕ್ಕೆ ವರದಿ ನೀಡಿ ಈ ಬೃಹತ್ ಕಾರ್ಖಾನೆಯ ವಿಸ್ತರಣೆಗೆ ತಡೆ ನೀಡಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಕುಕನೂರು ತಾಲೂಕಾಧ್ಯಕ್ಷ ರಮೇಶ ಚಂಡೂರು, ಭಾಗ್ಯನಗರ ಅಧ್ಯಕ್ಷ ವೀರೇಶ ಮುಂಡಾಸದ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ, ಮುಖಂಡರಾದ ಸಂಜೀವಸಿಂಗ್ ಹಜಾರೆ, ಪರಮೇಶ್ವರಪ್ಪ ಉಪ್ಪಿನ್, ವೆಂಕಟೇಶ ತಟ್ಟಿ, ಮಂಜುನಾಥ ಗೊಂಬಿ, ಮಹ್ಮದ ರಫಿ ನದಾಫ್, ಅಶ್ವತ್ಥ ರಾಯದುರ್ಗ, ವೀರೇಶ ಎಸ್.ಎಂ, ವಿನೋದ ಗೊಂದಕರ ಇತರರಿದ್ದರು.