ಜಿಲ್ಲೆಯ ಎಲ್ಲಾ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಕಡ್ಡಾಯವಾಗಿ ಮಾದಕವಸ್ತು ನಿಯಂತ್ರಣ ಆಂತರಿಕ ಸಮಿತಿಗಳನ್ನು ರಚಿಸಬೇಕು ಮತ್ತು ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಚರ್ಚಿಸಬೇಕು
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರುಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಪ್ರಮುಖ ಉದ್ದಿಮೆದಾರರ ವಿಶೇಷ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯ ಎಲ್ಲಾ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಕಡ್ಡಾಯವಾಗಿ ಮಾದಕವಸ್ತು ನಿಯಂತ್ರಣ ಆಂತರಿಕ ಸಮಿತಿಗಳನ್ನು ರಚಿಸಬೇಕು ಮತ್ತು ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಚರ್ಚಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಂಸ್ಥೆಗಳು ತಮ್ಮ ಸ್ವಂತ ನಿಧಿಯಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಕರಪತ್ರಗಳು ಮತ್ತು ಮಾಹಿತಿ ಸಾಮಗ್ರಿಗಳನ್ನು ಸಿದ್ಧಪಡಿಸಿ, ಕಾರ್ಮಿಕರಲ್ಲಿ ನಿರಂತರ ಜಾಗೃತಿ ಮೂಡಿಸಬೇಕು. ಮಾದಕವಸ್ತು ಮುಕ್ತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ರೂಪಿಸಲಾಗಿರುವ ವಿಶೇಷ ಮೊಬೈಲ್ ಆಪ್‌ನ್ನು ಎಲ್ಲಾ ಉದ್ಯೋಗಿಗಳು ಡೌನ್‌ಲೋಡ್ ಮಾಡಿಕೊಂಡು ಬಳಸುವಂತೆ ಉತ್ತೇಜಿಸಬೇಕು ಎಂದರು.ಮಾದಕವಸ್ತು ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯೊಂದಿಗೆ ಕೈಗಾರಿಕೆಗಳು ನಿರಂತರ ಸಂಪರ್ಕ ಮತ್ತು ಸಮನ್ವಯ ಸಾಧಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕೈಗಾರಿಕಾ ಪ್ರದೇಶಗಳಿಗೆ ಆಕಸ್ಮಿಕ ಭೇಟಿ ನೀಡಲಿದ್ದು, ಉದ್ದಿಮೆದಾರರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಉದ್ಯೋಗದಾತರು ತಮ್ಮ ಸಂಸ್ಥೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಭದ್ರತಾ ಕ್ರಮಗಳು, ಆಲ್ಕೋಹಾಲ್ ಪತ್ತೆ ಹಚ್ಚುವ ತಪಾಸಣೆಗಳು ಹಾಗೂ ಆಪ್ತ ಸಮಾಲೋಚನಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಜಿಲ್ಲೆಯನ್ನು ಮಾದಕವಸ್ತು ಮುಕ್ತವಾಗಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವುದಾಗಿ ಉದ್ಯಮದ ಪ್ರತಿನಿಧಿಗಳು ಭರವಸೆ ನೀಡಿದರು.ಸಭೆಯಲ್ಲಿ ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಇದ್ದರು.