ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.ಮಂಗಳವಾರ ಬೆಳಗ್ಗೆ ಆಸ್ಪತ್ರೆ ಎದುರು ಜಮಾಯಿಸತೊಡಗಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪ್ರತಿಭಟನಾನಿರತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಡಿಎಚ್‍ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರ ಜೊತೆ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಉಪವಿಭಾಗಾಧಿಕಾರಿ, ಡಿಎಚ್‌ಒ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಅಹೋರಾತ್ರಿ ಮೌನ ಪ್ರತಿಭಟನೆ ಮುಂದುವರಿಸಿದ್ದರು.ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯಶವಂತ ಗಂಗೊಳ್ಳಿ, ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್‍ಓ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಮಾತು ಉಳಿಸಿಕೊಂಡಿಲ್ಲ ಎಂದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮಗುವಿನ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಗು ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಇದ್ದರೆ ತಂಡ ರಚಿಸಿಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ತನಿಖೆ ನಡೆಸಿ ಸರ್ಕಾರದ ಗಮನಕ್ಕೆ ತರುತ್ತೇವೆ. ತಾತ್ಕಾಲಿಕವಾಗಿ ವೈದ್ಯರನ್ನು ಬೇರೆಡೆಗೆ ವರ್ಗಾಯಿಸುತ್ತೇವೆ. ಇಲ್ಲಿ ಬೇರೆ ವೈದ್ಯರ ನೇಮಕ ಮಾಡುತ್ತೇವೆ. ನಿಯಮಾನುಸಾರ ಕ್ರಮ ಜರುಗಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಒ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್., ಟಿಎಚ್‍ಒ ಪ್ರೇಮಾನಂದ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ರೊಬೆಲ್ಲೋ, ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣಾ ನಿರೀಕ್ಷಕ ನಂದ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಿಬ್ಬಂದಿ ಇದ್ದರು.ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ ಸಹಿತ ಹಲವು ಪ್ರಮುಖರು ಪಾಲ್ಗೊಂಡರು.ಕನಸುಗಳೆಲ್ಲಾ ನುಚ್ಚು ನೂರಾಯ್ತು!:
ಪತ್ನಿಗೆ 8 ತಿಂಗಳು 15 ದಿನ ತುಂಬಿದ ಬಳಿಕ ನ.16ರಂದು ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದೇವೆ. ಪರೀಕ್ಷಿಸಿದ ವೈದ್ಯರು ಏನೂ ಸಮಸ್ಯೆ ಇಲ್ಲ ಎಂದು ವಾಪಾಸ್ ಕಳುಹಿಸಿದ್ದರು. ಮಾರನೇ ದಿನ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದು ದಾಖಲಾದೆವು. ಸಮಸ್ಯೆಯ ಬಗ್ಗೆ ಏನೂ ಹೇಳಿಲ್ಲ. ಸ್ಕ್ಯಾನಿಂಗ್ ಮಾಡಿ ಎಂದರೂ ಈಗ ಬೇಡ ಎಂದರು. ಎರಡು ದಿನ ಅದೇ ನೋವಿನಲ್ಲಿ ಒಡ್ಡಾಡಿದರೂ ಪತ್ನಿಗೆ ಏನೂ ಚಿಕಿತ್ಸೆ ನೀಡಿಲ್ಲ. ನ.20ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಕರುಳ ಬಳ್ಳಿ ಸುತ್ತಿಕೊಂಡಿದ್ದರಿಂದ ಮಗು ಸತ್ತಿದೆ ಎಂದು ಹೇಳಿದ್ದಾರೆ. ಮದುವೆಯಾಗಿ ನಾಲ್ಕು ವರ್ಷದ ಬಳಿಕ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೆವು. ನೂರಾರು ಆಸೆಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಎಲ್ಲ ಆಸೆಗಳು ನುಚ್ಚುನೂರಾಗಿದೆ ಎಂದು ಮಗುವಿನ ತಂದೆ ಶ್ರೀನಿವಾಸ್ ಖಾರ್ವಿ ಮಾಧ್ಯಮಗಳ ಮುಂದೆ ಕಣ್ಣೀರಾದರು.ಸಂತ್ರಸ್ತರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದನ್ವರ ದೂರನ್ನು ವೈದ್ಯಕೀಯ ಮಂಡಳಿಗೆ ವರ್ಗಾಯಿಸಿ ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು.। ಡಾ. ಅರುಣ್ ಕೆ., ಪೊಲೀಸ್ ವರಿಷ್ಠಾಧಿಕಾರಿ--------------ಮಗುವಿನ ಸಾವು ದುರದೃಷ್ಟಕರ. ಪ್ರಕರಣದ ಕುರಿತಂತೆ ಆರೋಗ್ಯ ಸಚಿವರು ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ನಾಲ್ಕೈದು ದಿನಗಳಲ್ಲಿ ಉಸ್ತುವಾರಿ ಸಚಿವರನ್ನು ಕರೆಸಿ, ಸಭೆ ನಡೆಸಿ ಇಲ್ಲಿನ ಸಮಸ್ಯೆಗಳ ಕುರಿತಂತೆ ಕ್ರಮಕೈಗಳ್ಳಲಾಗುವುದು.
। ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾಂಗ್ರೆಸ್ ಮುಖಂಡ.