ಸಾರಾಂಶ
-ಮಗು ಕಿಡ್ನಾಪ್ ಮಾಡಿದ ನಕಲಿ ನರ್ಸ್‌ಗಳುಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಜಿಮ್ಸ್ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಸೋಮವಾರ ನವಜಾತ ಶಿಶುವಿನ ಅಪಹರಣವಾಗಿದೆ. ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಆಸ್ಪತ್ರೆಯ ಪ್ರಸೂತಿ ನಂತರದ ವಾರ್ಡ್‌ಗೆ ಬಂದು ಬ್ಲಡ್ ಟೆಸ್ಟ್ ಮಾಡಿಕೊಂಡು ಬರೋದಿದೆ ಬನ್ನಿ ಎಂದು ಶಿಶುವಿನ ಬಂಧುಗಳು, ಪೋಷಕರಿಗೆ ಯಾಮಾರಿಸಿ ಸಿನಿಮೀಯ ರೀತಿಯಲ್ಲಿ ಶಿಶುವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.ಪ್ರಕರಣವೇನು?:
ಚಿಂಚೋಳಿಯ ಕಸ್ತೂರಿಬಾಯಿ ಭಾನುವಾರ ರಾತ್ರಿ 12ಕ್ಕೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗಿನ ಜಾವ 5ರ ಸುಮಾರಿಗೆ ಸುಸೂತ್ರ ಹೆರಿಗೆಯಾಗಿ ಗಂಡು ಮಗುವಿನ ಜನನವಾಗಿದೆ. ಸೋಮವಾರ ಮಧ್ಯಾಹ್ನ ಸುಮಾರು 3ಕ್ಕೆ ಪ್ರಸೂತಿ ನಂತರದ ವಾರ್ಡ್‌ನಲ್ಲಿ ಬಂಧುಗಳ ಜೊತೆಗಿದ್ದಾಗಲೇ ಇಬ್ಬರು ಮಹಿಳೆಯರು ಬಿಳಿ ಎಫ್ರಾನ್ ಧಾರಿಗಳಾಗಿ ಬಂದಿದ್ದಾರೆ. ಬ್ಲಡ್ ಟೆಸ್ಟ್ ಮಾಡಿಸೋದಿದೆ ಎಂದು ರೂಮ್ ನಂ.130ಕ್ಕೆ ಕರೆದಿದ್ದಾರೆ.ಆಗ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನು ಎತ್ತಿಕೊಂಡು ಅವರ ಹಿಂದೆ ಬಂದಿದ್ದಾರೆ. ವಾರ್ಡ್ ಹೊರಗೆ ಬರುತ್ತಿದ್ದಂತೆ ಮಹಿಳೆಯರಿಬ್ಬರೂ ಫೈಲ್ ಎಲ್ಲಿ?, ಬೇಗ ತನ್ನಿ ಎಂದು ಹೇಳಿದ್ದಾರೆ. ಮಗುವನ್ನು ಈ ಮಹಿಳೆಯರ ಕೈಗೆ ನೀಡಿದ ಚಂದ್ರಕಲಾ, ಫೈಲ್ ತರಲು ವಾಪಸ್ ಹೋದಾಗ ನವಜಾತ ಶಿಶುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ। ಶರಣಪ್ರಕಾಶ ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಪೋಷಕರು, ಬಂಧುಗಳನ್ನು ಕಂಡು ಮಾತುಕತೆ ನಡೆಸಿದರು. ಘಟನೆಯ ಮಾಹಿತಿ ಪಡೆದು ಮಗುವಿನ ಪತ್ತೆ ಹಚ್ಚೋದಾಗಿ ಅಭಯ ನೀಡಿದರು.+++ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವರು, ಕಮೀಶನರ್ ಅವರಿಂದ ತನಿಖೆ ಸಾಗಿದೆ. ಘಟನೆಯ ಸಮಗ್ರ ತನಿಖೆಗೆ ಇಲಾಖಾ ವಿಚಾರಣೆಗೆ ಆದೇಶ ಮಾಡಿದ್ದೇನೆ. ಇಲಾಖಾ ವಿಚಾರಣೆಯಿಂದಾಗಿ ಹೆರಿಗೆ ವಾರ್ಡ್‌ನಲ್ಲಿನ ಲೋಪಗಳು, ಯಾರು ಇಂತಹ ಘಟನೆಗೆ ಜವಾಬ್ದಾರರು ಎಂಬುದು ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೋಟ್:ಜಿಮ್ಸ್ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಮಗು ಅಪಹರಣ ಪ್ರಕರಣದ ತನಿಖೆಗೆ 3 ವಿಶೇಷ ತಂಡ ರಚಿಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತದೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯಲ್ಲಿನ ಮಾಹಿತಿ ಸೇರಿದಂತೆ ಪ್ರಕರಣದ ಬಗ್ಗೆ ಎಲ್ಲಾ ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ. ಮಗು ಎಲ್ಲಿದೆ?, ಅಪಹರಿಸಿದವರು ಯಾರು?, ಎಂಬ ಬಗ್ಗೆ ಕೆಲವು ಸುಳಿವು ದೊರಕಿದ್ದು, ಅದನ್ನಾಧರಿಸಿ ತನಿಖೆ ಸಾಗಿದೆ.
- ಡಾ.ಶರಣಪ್ಪ ಢಗೆ, ಕಲಬುರಗಿ ಪೊಲೀಸ್ ಕಮೀಶನರ್.