ಆಧುನಿಕ ಚಿಕಿತ್ಸೆಗಳಿಂದ ಬಂಜೆತನ ನಿವಾರಣೆಗೆ ಸಾಧ್ಯ

| Published : Jan 03 2025, 12:32 AM IST

ಸಾರಾಂಶ

ಮೂಢನಂಬಿಕೆ ಹಾಗೂ ಸಾಮಾಜಿಕ ವ್ಯವಸ್ಥೆಗಳ ಪರಿಣಾಮ ಸಕಾಲದಲ್ಲಿ ದಂಪತಿಗೆ ಮಕ್ಕಳು ಆಗಲಿಲ್ಲ ಎಂಬ ಕಾರಣಗಳಿಗೆ ಹೆಣ್ಣನ್ನು ಕೇವಲವಾಗಿ ನೋಡುವ ಪರಿಸ್ಥಿತಿ ಸಮಾಜದಲ್ಲಿ ಇನ್ನೂ ಇದೆ. ಬಂಜೆತನಕ್ಕೆ ಹೆಣ್ಣು ಮತ್ತು ಗಂಡು ಇಬ್ಬರೂ ಕಾರಣರಾಗಿರುತ್ತಾರೆ. ಕೆಲವೊಮ್ಮೆ ಇಬ್ಬರನ್ನೂ ಮೀರಿ ಕೆಲ ಕಾರಣಗಳು ಇರುವ ಸಾಧ್ಯತೆಗಳಿರುತ್ತವೆ ಎಂದು ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಆಸ್ಪತ್ರೆಯ ಐವಿಎಫ್ ತಜ್ಞೆ ಡಾ.ವರದಾ ಕಿರಣ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರದಲ್ಲಿ ಡಾ.ವರದಾ ಕಿರಣ್ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮೂಢನಂಬಿಕೆ ಹಾಗೂ ಸಾಮಾಜಿಕ ವ್ಯವಸ್ಥೆಗಳ ಪರಿಣಾಮ ಸಕಾಲದಲ್ಲಿ ದಂಪತಿಗೆ ಮಕ್ಕಳು ಆಗಲಿಲ್ಲ ಎಂಬ ಕಾರಣಗಳಿಗೆ ಹೆಣ್ಣನ್ನು ಕೇವಲವಾಗಿ ನೋಡುವ ಪರಿಸ್ಥಿತಿ ಸಮಾಜದಲ್ಲಿ ಇನ್ನೂ ಇದೆ. ಬಂಜೆತನಕ್ಕೆ ಹೆಣ್ಣು ಮತ್ತು ಗಂಡು ಇಬ್ಬರೂ ಕಾರಣರಾಗಿರುತ್ತಾರೆ. ಕೆಲವೊಮ್ಮೆ ಇಬ್ಬರನ್ನೂ ಮೀರಿ ಕೆಲ ಕಾರಣಗಳು ಇರುವ ಸಾಧ್ಯತೆಗಳಿರುತ್ತವೆ ಎಂದು ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಆಸ್ಪತ್ರೆಯ ಐವಿಎಫ್ ತಜ್ಞೆ ಡಾ.ವರದಾ ಕಿರಣ್ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಹೊನ್ನಾಳಿ ಮತ್ತು ಮಲೇಬೆನ್ನೂರು ಘಟಕಗಳು, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ, ದಾವಣಗೆರೆಯ ಕಡ್ಲಿ ಐ.ವಿ.ಎಫ್. ಸೆಂಟರ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಮದುವೆಯಾಗಿ ಮಕ್ಕಳು ಬಯಸುವವರು 12 ತಿಂಗಳೊಳಗೆ ಮಹಿಳೆ ಗರ್ಭಿಣಿ ಆಗಬೇಕು. ಇಲ್ಲವಾದಲ್ಲಿ ದಂಪತಿ ಕೂಡಲೇ ಸಂಬಂಧಿಸಿದ ತಜ್ಞವೈದ್ಯರನ್ನು ಕಂಡು ಸೂಕ್ತ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳಬೇಕು. ಇಂದಿನ ಕಾಲದಲ್ಲಿ ಮಕ್ಕಳಾಗಲಿಲ್ಲ ಎಂದು ಕೊರಗುವ ಪ್ರಶ್ನೆಯೇ ಇಲ್ಲ. ಬಂಜೆತನ ನಿವಾರಣೆಗೆ ಸಾಕಷ್ಟು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಲಭ್ಯ ಇವೆ ಎಂದರು.

ಆದರೆ ಕೆಲ ಕುಟುಂಬಗಳು ಆರ್ಥಿಕ ತೊಂದರೆಯಿಂದಾಗಿ ವೈದ್ಯರ ಬಳಿ ಚಿಕಿತ್ಸೆಗಾಗಿ ಹೊಗಲು ಹಿಂದೇಟು ಹಾಕುವ ಉದಾಹರಣೆಗಳಿವೆ. ಇದಕ್ಕಾಗಿ ಲಯನ್ಸ್ ಸಂಸ್ಥೆ ಇಂತಹ ಕುಟುಂಬಗಳ ನೆರವಿಗೆ ಮುಂದಾಗಿದೆ. ಇವರ ಜೊತೆಗೆ ಕಡ್ಲಿ ಐವಿಎಫ್ ಸೆಂಟರ್‌ನವರು ಕೂಡ ನೆರವಿಗೆ ಕೈ ಜೋಡಿಸಲಿದ್ದಾರೆ. ಮಕ್ಕಳಾಗದ ಬಡದಂಪತಿಗಳು ಇದ್ದಲ್ಲಿ ಯಾವುದೇ ಅಂಜಿಕೆ ಇಲ್ಲದೇ ವೈದ್ಯಕೀಯ ಸೌಲಭ್ಯ ಪಡೆಯಬೇಕು. ಆ ಮೂಲಕ ಮಕ್ಕಳನ್ನು ಪಡೆಯುವ ಎಲ್ಲ ಆರೋಗ್ಯ ಚಿಕಿತ್ಸೆಗಳ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಕ್ಲಬ್‌ ಸದಸ್ಯ ರುದ್ರೇಶ್ ಮಾತನಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಸದಸ್ಯರನ್ನು ಅಂದರೆ, 14 ಲಕ್ಷ ಸದಸ್ಯರನ್ನು ಹೊಂದಿರುವ ಹಾಗೂ ದೇಶದಲ್ಲಿ 48 ಸಾವಿರ ಕ್ಲಬ್‌ಗಳನ್ನು ಲಯನ್ಸ್ ಸಂಸ್ಥೆ ಹೊಂದಿದೆ. ಇದರ ಮೂಲ ಉದ್ದೇಶ ಸಾಮಾಜಿಕ ಸೇವೆಯಾಗಿದೆ. ಈ ಸಂಸ್ಥೆ ಪ್ರಪಂಚದ ಯುಎನ್ಒ ಸಂಸ್ಥೆ ಸದಸ್ಯತ್ವ ಕೂಡ ಹೊಂದಿದೆ ಎಂದು ಹೇಳಿದರು.

ನಾಗರಾಜ್ ಚಟ್ಟಕ್ಕಿ, ಅಧ್ಯಕ್ಷತೆ ವಹಿಸಿದ್ದ ಹೊನ್ನಾಳಿ ಲಯಸ್ಲ್ ಕ್ಲಬ್ ಅಧ್ಯಕ್ಷ ಮುರುಗೇಶ್, ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ, ಆಸ್ಪತ್ರೆಯ ಹಿರಿಯ ದಾದಿ ಅನುಪಮ ಹಾಗೂ ಸಿರಿಗೆರೆ ಸಿದ್ದಪ್ಪ ಮಾತನಾಡಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಚಂದ್ರಪ್ಪ, ತರಗನಹಳ್ಳಿ ಅಶೋಕ್, ಬಸವರಾಜ್ ಬಲಮುರಿ, ಹರೀಶ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ 40ಕ್ಕೂ ಹೆಚ್ಚು ಫಲಾನುಭವಿ ದಂಪತಿಯನ್ನು ಗುರುತಿಸಿ ಐವಿಎಫ್ ಸೆಂಟರ್‌ಗೆ ಚಿಕಿತ್ಸೆಗಾಗಿ ಬರಲು ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಶಿವಕುಮಾರ್ ಕುಳಗಟ್ಟೆ ಸ್ವಾಗತಿಸಿ ನಿರೂಪಿಸಿದರು. ವಿನಾಯಕ ಶೆಟ್ಟಿ ವಂದಿಸಿದರು.

- - -

ಕೋಟ್‌ ಬಹುಪಾಲು ಸಂದರ್ಭಗಳಲ್ಲಿ ಗಂಡು ಇಲ್ಲವೇ ಹೆಣ್ಣು, ಕೆಲವೊಮ್ಮೆ ಇಬ್ಬರು ಕೂಡ ಬಂಜೆತನಕ್ಕೆ ಕಾರಣವಾಗಿರುತ್ತಾರೆ. ಕೆಲ ಸ್ತ್ರೀಯರಲ್ಲಿ ಗರ್ಭಕೋಶವೇ ಬೆಳವಣಿಗೆಯೇ ಆಗದ ಅಪರೂಪದ ಪ್ರಕರಣಗಳು ಕೂಡ ಇರುತ್ತವೆ. ಮಕ್ಕಳಿಲ್ಲದ ದಂಪತಿ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು

- ಡಾ. ಹನುಮಂತಪ್ಪ, ಪ್ರಸೂತಿ ತಜ್ಞ, ಸರ್ಕಾರಿ ಆಸ್ಪತ್ರೆ, ಹೊನ್ನಾಳಿ

- - - -2ಎಚ್.ಎಲ್.ಐ1:

ಲಯನ್ಸ್ ಕ್ಲಬ್ ಹೊನ್ನಾಳಿ ಮತ್ತು ಮಲೇಬೆನ್ನೂರು ಘಟಕಗಳು, ಹೊನ್ನಾಳಿ ಸರ್ಕಾರಿ ಆಸ್ಪತ್ರೆ, ದಾವಣಗೆರೆಯ ಕಡ್ಲಿ ಐ.ವಿ.ಎಫ್. ಸೆಂಟರ್ ಆಶ್ರಯದಲ್ಲಿ ಗುರುವಾರ ಹೊನ್ನಾಳಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ ನಡೆಯಿತು.