ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ನಡೆಯುತ್ತಿದ್ದು, ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕದೆ ಹೋದರೆ, ನನಗೆ ಶಕ್ತಿ ತುಂಬಲು ಆಗಲ್ಲ’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಅವರಿಗೂ ತಮಗೆ ಸಿಎಂ ಸ್ಥಾನ ಸಿಗುತ್ತೋ ಇಲ್ಲವೋ ಎಂಬ ಅಸಮಾಧಾನವಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಈ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ಗೊಂದಲಗಳಿವೆ ಎಂಬುದು ಅರ್ಥವಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಚುನಾವಣೆ ಬಂದ ಕಾರಣ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್‍ನಲ್ಲಿ ಅಲ್ಪವಿರಾಮ ಬಿದ್ದಿದೆ. ಕೆಲವೇ ದಿನಗಳಲ್ಲಿ ಆಲ್ ಇಂಡಿಯಾ ಕಾಂಗ್ರೆಸ್‍ನಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ. ಅದೇ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಸಹ ಬೀಳಲಿದೆ. ರಾಜ್ಯದಲ್ಲಿ ಸಿಎಂ ಆಗಲು ಸಾಕಷ್ಟುಜನ ಪೈಪೋಟಿ ನಡೆಸುತ್ತಿದ್ದಾರೆ. ಸಿಎಂ ಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿದೆ ಎಂದರು.ರಾಜ್ಯದ ನಾಲ್ವರು ಸಚಿವರು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರ ತಮಗೆ ಗೊತ್ತಿಲ್ಲ ಎಂದ ಬೊಮ್ಮಾಯಿ, ಚುನಾವಣೆ ಬಳಿಕ ವಿಜಯೇಂದ್ರ ತಮ್ಮ ಸ್ಥಾನದಲ್ಲಿ ಇರಲ್ಲ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ‘ಸರ್ಟಿಫಿಕೇಟ್ ಕೊಡೋಕೆ ಅವರ್‍ಯಾರು? ಅವರು ಏನೆನೊ ಅಂತಾರೆ, ಅನ್ನಲಿ ಬಿಡಿ’ ಎಂದರು.
ಕಲ್ಯಾಣ ಕರ್ನಾಟಕ ಭಾಗವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಈವರೆಗೆ ಒಂದೇ ಒಂದು ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ರಿವ್ಯೂ ಮಿಟಿಂಗ್ ಮಾಡಿಲ್ಲ ಎಂದು ಟೀಕಿಸಿದರು.ಬರ ನಿರ್ವಹಣೆಯಲ್ಲೂ ವಿಫಲ: ಸರ್ಕಾರದಿಂದ ಬರ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ. ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ನಯಾ ಪೈಸೆ ಖರ್ಚು ಮಾಡುತ್ತಿಲ್ಲ. ಮಾತ್ತೆತ್ತಿದರೆ ಡಿಸಿ ಬಳಿ ಕೋಟ್ಯಂತರ ರು. ಹಣ ಇದೆ ಅಂತಾರೆ. ಇದರಿಂದ ಇದು ರೈತ ವಿರೋಧಿ ಸರ್ಕಾರ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇನ್ನೊಂದೆಡೆ, ಶಾಸಕರಿಗೆ ಅನುದಾನ ಅನ್ನೋದು ಮರಿಚೀಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಪ್ಪು ಮಾಡುವವರಿಗೆ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ ಎಂದು ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕ್ರೈಂ ಹೆಚ್ಚಳವಾಗುತ್ತಿದೆ. ಕಾಲೇಜು ಕ್ಯಾಂಪಸ್‍ನಲ್ಲಿ ನುಗ್ಗಿ ಕೊಲೆ ಮಾಡಲಾಗುತ್ತಿದೆ. ಡ್ರಗ್ ಮಾಫಿಯಾ ರಾಜ್ಯಾದ್ಯಂತ ಹರಡಿದೆ. ಈ ಸರಕಾರ ಬಂದ ಮೇಲೆ ಸಮಾಜ ಘಾತುಕ ಶಕ್ತಿಗಳಿಗೆ ದೊಡ್ಡಮಟ್ಟದ ಶಕ್ತಿ ಬಂದಿದೆ ಎಂದರು.
ಶಿಕ್ಷಣ ಕ್ಷೇತ್ರ ಅಸ್ತವ್ಯಸ್ಥೆ: ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸುತ್ತಾ ಸಂಪೂರ್ಣ ಹದಗೆಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.ಈ ಸರ್ಕಾರ ಬಂದಮೇಲೆ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶಿಕ್ಷಕರ ನೇಮಕಾತಿ ವಿಚಾರದಲ್ಲೂ ಗೊಂದಲ ಹುಟ್ಟಿಸಲಾಗಿದೆ. ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅತೀ ಕಡಿಮೆ ಅನುದಾನ ಇಟ್ಟಿದ್ದಾರೆ ಎಂದು ಬೇಸರ ಹೊರಹಾಕಿದರು.
ನಾವು ಎನ್‍ಇಪಿ ತಂದಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನುಅನುಷ್ಠಾನಕ್ಕೆ ತಂದಿಲ್ಲ. ಆ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಕಾಂಗ್ರೆಸ್ ಸರ್ಕಾರ ಗೊಂದಲಮಯ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರು ಹೆಚ್ಚಾಗಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದರು.ಪ್ರಜ್ವಲ್ ರಕ್ಷಣೆಯ ಮಾತೇ ಇಲ್ಲ: ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ರಕ್ಷಿಸುವ ಮಾತೇ ಉದ್ಭವಿಸುವುದಿಲ್ಲ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ತಪ್ಪು ಮಾಡಿದವರನ್ನುನಾವು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಪ್ರಜ್ವಲ್ ಪಾಸ್‍ಪೋರ್ಟ್ ರದ್ದುಪಡಿಸಲು ಕೇಂದ್ರ ಸರ್ಕಾರ ತನ್ನ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ನಾವ್ಯಾರೂ ರಕ್ಷಿಸುತ್ತಿಲ್ಲ ಎಂದರು.ಪ್ರಜ್ವಲ್ ಬಂಧನದ ಬಗ್ಗೆ ಬಿಜೆಪಿ ಕೇಂದ್ರಕ್ಕೆ ಪತ್ರ ಬರೆದಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಪತ್ರ ಬರೆಯೋಕೆ ಏನಿದೆ?ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ ಎಂದ ಮೇಲೆ ಅಲ್ಲಿ ಪತ್ರ ಬರೆಯುವುದರ ಮಹತ್ವ ಏನಿರುತ್ತದೆ ಎಂದು ಅಚ್ಚರಿಯಿಂದ ಪ್ರಶ್ನಿಸಿದರು.