ಸಾರಾಂಶ
- ದೇಶದಲ್ಲಿ ಶೇ.3.34, ಕರ್ನಾಟಕದಲ್ಲಿ ಶೇ.4.44 । ರಾಜ್ಯ ನಂ.3
------ ಕೇಂದ್ರ ಸರ್ಕಾರದ ಮಾರ್ಚ್ ಹಣದುಬ್ಬರ ವರದಿ ಬಿಡುಗಡೆ
- ದೇಶದಲ್ಲಿ ಶೇ.3.34 ಹಣದುಬ್ಬರ 6 ವರ್ಷದ ಅತಿ ಕನಿಷ್ಠ- ದೇಶದ ಅಂಕಿ ಜತೆ ರಾಜ್ಯವಾರು ಅಂಕಿ ಅಂಶವೂ ರಿಲೀಸ್
- ಕೇರಳ ನಂ.1, ಗೋವಾ ನಂ.2, ಕರ್ನಾಟಕಕ್ಕೆ 3ನೇ ಸ್ಥಾನ- ಕರ್ನಾಟಕದ ಹಣದುಬ್ಬರ ದೇಶದ ಸರಾಸರಿಗಿಂತ ಹೆಚ್ಚು
- ಬೆಲೆ ಏರಿಕೆ ಬಗ್ಗೆ ಮೊನ್ನೆಯಷ್ಟೇ ಕರ್ನಾಟಕ ಟೀಕಿಸಿದ್ದ ಮೋದಿ==ನವದೆಹಲಿ: ಮಾರ್ಚ್ ತಿಂಗಳ ಚಿಲ್ಲರೆ ಹಣದುಬ್ಬರ ಸೂಚ್ಯಂಕ ಪ್ರಕಟವಾಗಿದ್ದು, ಶೇ.3.34ರಷ್ಟು ದಾಖಲಾಗುವ ಮೂಲಕ ದೇಶದ ಹಣದುಬ್ಬರ 6 ವರ್ಷದ ಕನಿಷ್ಠಕ್ಕೆ ಇಳಿದಿದೆ. ಆದರೆ ಕರ್ನಾಟಕದ ಹಣದುಬ್ಬರ ಶೇ.4.44ರಷ್ಟು ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ ಹಾಗೂ ರಾಜ್ಯವು ದೇಶದಲ್ಲೇ 3ನೇ ಸ್ಥಾನ ಪಡೆದಿದೆ.
ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಹರ್ಯಾಣದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ವಿದ್ಯುತ್, ಇಂಧನ, ಹಾಲು, ಬಿತ್ತನೆ ಬೀಜ ಸೇರಿದಂತೆ ಎಲ್ಲಾ ವಸ್ತುಗಳ ಮೇಲೂ ತೆರಿಗೆ ಹಾಕಿದೆ. ಹೀಗಾಗಿ ರಾಜ್ಯದಲ್ಲಿ ಹಣದುಬ್ಬರ ಭಾರೀ ಏರಿಕೆಯಾಗಿದೆ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಪ್ರಕಟವಾದ ಚಿಲ್ಲರೆ ಹಣದುಬ್ಬರ ಸೂಚ್ಯಂಕದಲ್ಲಿ ಕರ್ನಾಟಕದಲ್ಲಿ ಹಣದುಬ್ಬರ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಕಂಡುಬಂದಿದೆ.ವರದಿ ಅನ್ವಯ, ಶೇ.6.59 ಹಣದುಬ್ಬರದೊಂದಿಗೆ ಕೇರಳ ಮೊದಲ ಸ್ಥಾನದಲ್ಲಿ, ಶೇ.5.63 ಹಣದುಬ್ಬರದೊಂದಿಗೆ 2ನೇ ಸ್ಥಾನ ಮತ್ತು ಶೇ.4.4 ಹಣದುಬ್ಬರದೊಂದಿಗೆ ಕರ್ನಾಟಕ 3ನೇ ಸ್ಥಾನ ಪಡೆದಿವೆ.
ದೇಶದ ಹಣದುಬ್ಬರ 6 ವರ್ಷದ ಕನಿಷ್ಠ:ತರಕಾರಿಗಳು ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರಿಂದ ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.3.34ಕ್ಕೆ ಇಳಿದಿದ್ದು, ಇದು 6 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇ.3.61ರಷ್ಟಿತ್ತು. ಕಳೆದ ಮಾರ್ಚ್ ಮಾರ್ಚ್‌ನಲ್ಲಿ ಶೇ.4.85ರಷ್ಟಿತ್ತು. 2025ನೇ ಸಾಲಿನ ಮಾರ್ಚ್‌ನಲ್ಲಿ ಶೇ.3.34 ದಾಖಲಾಗಿದ್ದು ಇದು 2019 ಆಗಸ್ಟ್ ಬಳಿಕದ ಅತಿ ಕನಿಷ್ಟವಾಗಿದೆ. ಇನ್ನು ಮಾರ್ಚ್‌ನಲ್ಲಿ ಆಹಾರ ಹಣದಬ್ಬರವು ಶೇ.2.69 ಆಗಿದ್ದು, ಫೆಬ್ರವರಿಯಲ್ಲಿ ಶೇ.3.75 ಮತ್ತು 2024ರ ಮಾರ್ಚ್‌ನಲ್ಲಿ ಶೇ.8.52 ದಾಖಲಾಗಿತ್ತು.