ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಜತೆಗೆ ಪದವಿಯ ನಂತರ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ಹೊಂದಿರುವುದು ಅತ್ಯಂತ ಅವಶ್ಯಕ
ಕೊಪ್ಪಳ: ಇಂದಿನ ಡಿಜಿಟಲ್ ಕ್ರಾಂತಿಯಿಂದ ಮಾಹಿತಿಯು ಯಾವುದೇ ಸಾಮಾಜಿಕ, ರಾಜಕೀಯ ಸಮುದಾಯದ ಸ್ವತ್ತಾಗಿ ಉಳಿಯದೇ ಸರ್ವ ವ್ಯಾಪಿಯಾಗಿದೆ. ವಿದ್ಯಾರ್ಥಿಗಳು ಈ ಮಾಹಿತಿ ಕ್ರಾಂತಿಯ ಪ್ರಯೋಜನ ಬಳಸಿಕೊಂಡು ಉತ್ತಮ ಭವಿಷ್ಯರೂಪಿಸಿಕೊಳ್ಳಬೇಕು. ಜತೆಗೆ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿರುವ ಅನಾವಶ್ಯಕ ಮಾಹಿತಿ ದಾಳಿಯ ಬಗ್ಗೆಯೂ ಎಚ್ಚರದಿಂದಿರಬೇಕು ಎಂದು ದಕ್ಷಿಣ ಪಶ್ಚಿಮ ರೇಲ್ವೇಯ ಮುಖ್ಯ ವಿಚಕ್ಷಣಾಧಿಕಾರಿ ಸಂತೋಷ ಹೆಗಡೆ ಹೇಳಿದರು.
ಪ್ರಧಾನಮಂತ್ರಿ ರಾಷ್ಟ್ರೀಯ ಉಚ್ಛಶಿಕ್ಷಣ ಅಭಿಯಾನದಡಿಯಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉದ್ಯೋಗ ಭರವಸಾಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸಾಕೋಶವು ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉದ್ಯೋಗಕೌಶಲ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಯೈ.ಬಿ.ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಜತೆಗೆ ಪದವಿಯ ನಂತರ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ಹೊಂದಿರುವುದು ಅತ್ಯಂತ ಅವಶ್ಯಕವಾಗಿದೆ. ಪದವಿ ಓದುವ ಜತೆಯಲ್ಲಿಯೇ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿಭವಿಷ್ಯಕ್ಕೆ ಸಹಾಯಕವಾಗುವ ಕೌಶಲ್ಯ ಕಲಿಯುವುದಕ್ಕಾಗಿಯೂ ಸಮಯ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿಯ ನಂತರ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಉದ್ಯೋಗಕೌಶಲ್ಯ ಕಾರ್ಯಕ್ರಮದಲ್ಲಿ, ನುರಿತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಪಡೆಯುವ ವಿಧಾನ ಮತ್ತು ಪ್ರಕ್ರಿಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸುಮಾರು 400 ಪದವಿ ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದರು.ಕಾಲೇಜಿನ ಉದ್ಯೋಗ ಭರವಸಾ ಕೋಶದ ಸಂಚಾಲಕ ಡಾ.ಎಸ್.ಬಾಲಾಜಿ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಪ್ರೊ.ಪ್ರಕಾಶ್‌ಗೌಡ ಎಸ್. ಯು, ಪಿಎಂಉಶಾ ಸಂಯೋಜಕ ಪ್ರೊ. ಸುಧಾ ಹೆಗಡೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಉಮೇಶರ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.