ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುರೈತರು ತಮ್ಮ ಜಮೀನುಗಳಿಗೆ ಕೆರೆಯಿಂದ ಮಣ್ಣು ತೆಗೆಯುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಕಡ್ಡಾಯವಾಗಿ ಮಾಹಿತಿ ಪತ್ರವನ್ನು ಸಲ್ಲಿಸಿರಬೇಕು. ಮಾಹಿತಿ ಪತ್ರ ಸಲ್ಲಿಸಿದವರಿಗೆ ಮಾತ್ರ ಕೆರೆ ಮಣ್ಣು ತೆಗೆಯಲು ಅನುಮತಿ ನೀಡಬೇಕೆಂದು ಜಿಪಂ ಸಿಇಒ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧ ಕೆರೆಗಳ ಹೂಳು ತೆಗೆಯುವ ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಎಲ್ಲ ತಾಲೂಕು ತಹಸೀಲ್ದಾರ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.ರೈತರ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೂಳು ತೆಗೆಯಬೇಕು. ಕೆರೆಯ ಏರಿಯ ತಳಭಾಗದಿಂದ 10 ಮೀಟರ್ ಅಂತರವನ್ನು ಕಾಯ್ದಿರಿಸಿ ನಂತರದ ಜಾಗದಲ್ಲಿ ಹೂಳು ತೆಗೆಯಲು ಹಾಗೂ ಕೆರೆಯ ಮೇಲೈ ಭಾಗದ 3 ಅಡಿ ಮಾತ್ರ ಹೂಳು ತೆಗೆಯಲು ಅವಕಾಶ ನೀಡಬೇಕು ಎಂದರು.ನಿಯಮಗಳನ್ನು ಉಲ್ಲಂಘಿಸಿ ಕೆರೆಗಳಿಂದ ಹೂಳು/ಮಣ್ಣು ತೆಗೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ನರೇಗಾ ಯೋಜನೆಯಡಿ ಅಮೃತ ಸರೋವರ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಕೆರೆ ಅಭಿವೃದ್ಧಿ, ಹೂಳು ತೆಗೆಯುವುದು, ಹಸಿರೀಕರಣ, ಫೀಡರ್ ಕಾಲುವೆಗಳ ಅಭಿವೃದ್ಧಿ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಎಲ್ಲಾ ತಾಲೂಕುಗಳ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗಿಯಾಗಿದ್ದರು.