ನ್ಯಾಡ್‌ನಲ್ಲಿ ದಾಖಲಾಗದ ಮಾಹಿತಿ, 630 ವಿದ್ಯಾರ್ಥಿಗಳು ಅತಂತ್ರ!

| Published : Mar 22 2024, 01:09 AM IST

ನ್ಯಾಡ್‌ನಲ್ಲಿ ದಾಖಲಾಗದ ಮಾಹಿತಿ, 630 ವಿದ್ಯಾರ್ಥಿಗಳು ಅತಂತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾಲಯಗಳು ನ್ಯಾಡ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಹಾಕದ ಕಾರಣ ಯುವನಿಧಿಗೆ ಅರ್ಜಿ ಸಲ್ಲಿಸಲು ಕೆಲವರಿಗೆ ತೊಂದರೆಯಾಗಿದೆ.

ಜಿ.ಡಿ. ಹೆಗಡೆ

ಕಾರವಾರ: ಬೇರೆ ಬೇರೆ ವಿಶ್ವವಿದ್ಯಾಲಯಗಳು ನ್ಯಾಡ್ ತಂತ್ರಾಂಶದಲ್ಲಿ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ ಅಪ್‌ಲೋಡ್ ಮಾಡದೇ ಜಿಲ್ಲೆಯ ೬೩೦ ಯುವಕ- ಯುವತಿಯರು ವಿದ್ಯಾನಿಧಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗಿದೆ.

ವಿವಿಗಳಿಂದ ನ್ಯಾಷನಲ್ ಅಕಾಡೆಮಿಕ್ ಡೆಪೋಸಿಟರಿ (ನ್ಯಾಡ್) ತಂತ್ರಾಂಶದಲ್ಲಿ ಆಯಾ ವರ್ಷ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಬೇಕು. ಆದರೆ ಕೆಲವು ವಿವಿಗಳು ಈ ಪ್ರಕ್ರಿಯೆ ನಡೆಸದ ಕಾರಣ ಜಿಲ್ಲೆಯ ಪದವೀಧರರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಆಯಾ ವಿಶ್ವವಿದ್ಯಾಲಯಗಳೇ ಮಾಡಬೇಕಿದೆ. ಬೇರೆಯವರಿಂದ ನ್ಯಾಡ್ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಲು ಆಗುವುದಿಲ್ಲ.

ಯುವನಿಧಿ ಯೋಜನೆಗೆ ೨೦೨೨- ೨೩ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಯ ಪದವಿ/ಡಿಪ್ಲೊಮಾ ಉತ್ತೀರ್ಣವಾದ ಬಗ್ಗೆ ಪರಿಶೀಲಿಸಲು ನ್ಯಾಡ್‌ನಲ್ಲಿ ಅಪ್‌ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ, ಡಿಪ್ಲೊಮಾ ಪ್ರಮಾಣಪತ್ರವನ್ನು ಅಥವಾ ತಾತ್ಕಾಲಿಕ ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುತ್ತದೆ. ಆದರೆ ಅಭ್ಯರ್ಥಿಗಳ ದಾಖಲೆಗಳನ್ನು ನ್ಯಾಡ್‌ನಲ್ಲಿ ಅಪ್‌ಲೋಡ್ ಮಾಡದ ಕಾರಣ ಅರ್ಹ ಅಭ್ಯರ್ಥಿಗಳು ವಿದ್ಯಾನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪದವಿ, ಡಿಪ್ಲೊಮಾ ಪಾಸಾದ ೫೯೬೮ ಜನರಿದ್ದು, ೯೫೦ ಜನ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ೫೩೮ ಜನ ಉದ್ಯೋಗದಲ್ಲಿದ್ದಾರೆ. ನ್ಯಾಡ್‌ನಲ್ಲಿ ಮಾಹಿತಿ ಇಲ್ಲದ ೬೩೦ ವಿದ್ಯಾರ್ಥಿಗಳು ಇದ್ದಾರೆ. ಕಾರವಾರ ೩೧೮, ಅಂಕೋಲಾ, ಕುಮಟಾ ೦, ಹೊನ್ನಾವರ ೫, ಭಟ್ಕಳ ೧೦೧, ಶಿರಸಿ ೧೩೦, ಸಿದ್ದಾಪುರ ೧೨, ಯಲ್ಲಾಪುರ ೮, ಮುಂಡಗೋಡ, ದಾಂಡೇಲಿ ೦, ಹಳಿಯಾಳ ೧೫, ಜೋಯಿಡಾ ೪೧ ಜನರ ದಾಖಲೆ ನ್ಯಾಡ್‌ನಲ್ಲಿ ಅಪ್‌ಲೋಡ್ ಆಗಿಲ್ಲ. ಹೀಗಾಗಿ ಇವರು ಅರ್ಜಿ ಸಲ್ಲಿಸಲು ಆಗಿಲ್ಲ. ಸರ್ಕಾರ ಒಳ್ಳೆಯ ಯೋಜನೆ ತಂದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯುವಕ- ಯುವತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಉತ್ತರ ಕನ್ನಡದಲ್ಲಿ ಹೆಚ್ಚಿನ ಯುವಕರು ಧಾರವಾಡದ ಕರ್ನಾಟಕ ವಿವಿಯಡಿ ಬರುವ ಕಾಲೇಜಿಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಇದರ ಹೊರತಾಗಿ ರಾಜ್ಯದ ಬೇರೆ ಬೇರೆ ವಿವಿಗಳಲ್ಲಿ ಕೂಡಾ ವ್ಯಾಸಂಗ ಮಾಡುವವರಿದ್ದು, ರಾಜ್ಯದ ವಿಶ್ವವಿದ್ಯಾಲಯಗಳು ಉತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿಯನ್ನು ನ್ಯಾಡ್ ತಂತ್ರಾಂಶದಲ್ಲಿ ಅಳವಡಿಸುವ ಕೆಲಸವನ್ನು ವೇಗವಾಗಿ ಮಾಡಬೇಕಿದೆ.

ಅರ್ಜಿ ಸಲ್ಲಿಸಲು ಅವಕಾಶ: ವಿಶ್ವವಿದ್ಯಾಲಯಗಳು ನ್ಯಾಡ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಹಾಕದ ಕಾರಣ ಯುವನಿಧಿಗೆ ಅರ್ಜಿ ಸಲ್ಲಿಸಲು ಕೆಲವರಿಗೆ ತೊಂದರೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನ್ಯಾಡ್‌ನಲ್ಲಿ ಮಾಹಿತಿ ಹಾಕಿದರೆ ಸರಿಯಾಗುತ್ತದೆ. ಎಲ್ಲ ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಯುವನಿಧಿ ಅಧಿಕಾರಿ ವಿನೋದ ನಾಯ್ಕ ತಿಳಿಸಿದರು.