ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಧಿನಿಯಮದಡಿ ಸಮೀಕ್ಷಾ ಕಾರ್ಯ
ಕನ್ನಡಪ್ರಭ ವಾರ್ತೆ ಹುಣಸೂರು
ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿನ ವಿವಿಧ ಗ್ರಾಮಗಳಿಗೆ ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಭೇಟಿ ನೀಡಿ ರೈತರು ಬೆಳೆದ ಬೆಳೆಗಳನ್ನು ಪರಿಶೀಲಿಸಿ ವಾಸ್ತವಸ್ಥಿತಿಗತಿಯ ಕುರಿತು ಮಾಹಿತಿ ಪಡೆದರು.ಮಂಗಳವಾರ ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕಟ್ಟೆಮಳಲವಾಡಿಯ ಒಡಕೆಕಟ್ಟೆ ವ್ಯಾಪ್ತಿಯಲ್ಲಿ ರೈತರು ಬೆಳೆದಿದ್ದ ಮುಸುಕಿನ ಜೋಳ ಮತ್ತು ತಂಬಾಕು ಬೆಳೆಗಳನ್ನು ಪರಿಶೀಲಿಸಿದರು.
ಅವಲತ್ತುಕೊಂಡ ರೈತರುಭೂಮಿಯ ಒಡತಿ ಪುಟ್ಟಮ್ಮಣಿಯಿಂದ ಬೆಳೆ ಹಾನಿಯ ಕುರಿತು ಮಾತನಾಡಿದಾಗ ತಮ್ಮ ತಾಯಿಯ ಹೆಸರಿನಲ್ಲಿ ಇರುವ ಈ ಎರಡು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆದಿದ್ದೆ. ಆದರೆ ಮಳೆ ಕೊರತೆಯಿಂದಾಗಿ ಇಡೀ ಪ್ರದೇಶದಲ್ಲಿ ಬೆಳೆ ಒಣಗಿದೆ ಸರ್. ಈ ಭೂಮಿಯನ್ನು ಬಿಟ್ಟರೆ ಇನ್ಯಾವುದೆ ಆದಾಯ ನಮಗಿಲ್ಲ. ಒಣಗಿ ಹೋದ ಜೋಳದ ಗಿಡವನ್ನು ಹಸುಗಳ ಮೇವಿಗೂ ಆಗುವುದಿಲ್ಲ ಎಂದು ಅವಲತ್ತುಕೊಂಡರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಧಿನಿಯಮದಡಿ ಸಮೀಕ್ಷಾ ಕಾರ್ಯ ನಡೆಸುತ್ತಿದೆ. ಮುಂದಿನ 10 ದಿನಗಳಲ್ಲಿ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದ ಸಚಿವರು ಸಮೀಕ್ಷಾ ಕಾರ್ಯ ಮತ್ತೊಮ್ಮೆ ನಡಸಲಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ತಾಲೂಕೆಂದ ಘೋಷಿಸಿದೆ. 10 ದಿನಗಳ ನಂತರದ ಸಮೀಕ್ಷೆಯಲ್ಲಿ ಇನ್ನು 50 ತಾಲೂಕುಗಳು ಬರಪೀಡಿತ ತಾಲೂಕೆಂದು ಘೋಷಣೆಯಾಗಬಹುದು. ಸೆ. 15ರ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ತದನಂತರ ಕೇಂದ್ರ ತಂಡ ರಾಜ್ಯಕ್ಕೆ ಬಂದು ಸಮೀಕ್ಷೆ ನಡಸಿ ವರದಿ ನೀಡಿದ ನಂತರ ಪರಿಹಾರ ಸಿಗುವುದು ಎಂದು ಅವರು ತಿಳಿಸಿದರು.ಈ ಭಾಗದಲ್ಲಿ ಮುಸುಕಿನ ಜೋಳ ಬೆಳೆಗೆ ಬಿಳಿಸುಳಿ ರೋಗ ಬಾಧೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ಈ ರೈತರ ನೆರವಿಗೆ ಸರ್ಕಾರ ಹೇಗೆ ಬರಬೇಕೆಂಬ ಬಗ್ಗೆ ಗಮನ ಹರಿಸಲಾಗುವುದು. ರೈತರು ವಿಮೆ ಹಣ ಕಟ್ಟಿದ್ದು ಪರಿಹಾರ ಸಿಗುವತ್ತ ಕಂಪನಿಯೊಂದಿಗೆ ಚರ್ಚಿಸಿ ಒನ್ ಟೈಮ್ ಸೆಟಲ್‌ಮೆಂಟ್ ಅಥವಾ ಇನ್ನಿತರ ಪರಿಹಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.ರಾಗಿ ಬೆಳೆಗಾರರ ಗತಿಯೇನು?
ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳ ನಂತರ (ಮುಂಗಾರು ನಂತರ ಅವಧಿ) 21 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಮಾಹಿತಿಯನ್ನು ಕೃಷಿ ಅಧಿಕಾರಿಗಳು ನೀಡಿದ್ದಾರೆ. ಆದರೆ ಹವಾಮಾನ ವರದಿಯನ್ವಯ ಸೆಪ್ಟೆಂಬರ್ 2ನೇ ವಾರದ ನಂತರ ಮಳೆ ಸಂಪೂರ್ಣವಾಗಿ ನಿಂತು ಹೋಗಲಿದೆ ಎಂದು ತಿಳಿದುಬಂದಿದ್ದು, ಎಲ್ಲ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮವಹಿಸಲಿದೆ ಎಂದು ಭರವಸೆ ನೀಡಿದರು.ಮೋಡ ಬಿತ್ತನೆ ಕಾರ್ಯ:
ಕೊಡಗು ಜಿಲ್ಲೆಯಿಂದ ಮೋಡ ಬಿತ್ತನೆ ಕಾರ್ಯ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಕುರಿತಾದ ಕ್ರಮಗಳು ನಡೆಯಲಿವೆ. ಆದರೆ ಮೋಡ ಬಿತ್ತನೆ ಕಾರ್ಯದ ಸಫಲತೆ ಎಷ್ಟು ಎನ್ನುವುದು ತಿಳಿಯುವುದು ಕಷ್ಟದಾಯಕ. ಬೆಳೆಗಳಿಗೆ ಸಾಕಾಗುವಷ್ಟು ಮಳೆ ಆದರೂ ಆಗಬಹುದು. ಆದರೆ ಮುಂದಿನ ಮಳಗಾಲದವರೆಗೆ ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ ಎಂದು ಹೇಳಲಾಗದು ಎಂದರು.ತಂಬಾಕಿಗೆ ಪರಿಹಾರ ಸಿಗಬಹುದೇ?
ತಾಲೂಕಿನಲ್ಲಿ ಈ ಬಾರಿ 16 ಸಾವಿರ ಎಕರೆ ಭೂಮಿಯಲ್ಲಿ ಬೆಳೆದ ತಂಬಾಕು ಉತ್ತಮ ಗುಣಮಟ್ಟದಲ್ಲಿ ಇಲ್ಲದೇ ರೈತರು ನಷ್ಟ ಅನುಭವಿಸಿದ್ದಾರೆ. ತಂಬಾಕು ವಾಣಿಜ್ಯ ಬೆಳೆಯಾಗಿದೆ. ಕೇಂದ್ರ ಸರ್ಕಾರದ ನೀತಿಯಲ್ಲಿ ತಂಬಾಕಿಗೆ ಪರಿಹಾರ ಸಿಗುವುದಿಲ್ಲ. ಆದರೆ ರಾಜ್ಯ ಸರ್ಕಾರ ರೈತರ ನರವಿಗೆ ಬರಬೇಕಿದ್ದು, ಈಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.ಶಾಸಕ ಜಿ.ಡಿ. ಹರೀಶ್ ಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಧನಂಜಯ್, ತಾಲೂಕು ಸಹಾಯಕ ನಿರ್ದೇಶಕ ಅನಿಲ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಕೆ.ಆರ್.ನಗರ ತಾಲೂಕು ಶಾಸಕ ಡಿ. ರವಿಶಂಕರ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ರೈತರು ಇದ್ದರು