ಸಾರಾಂಶ
‘ನಮ್ಮ ನಡೆ ಮತ ಗಟ್ಟೆ ಕಡೆ’ ಎಂಬ ಕಾರ್ಯಕ್ರಮದಡಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರತಿ ಮತಗಟ್ಟೆಗಳ ಮಾಹಿತಿ ಆಯಾ ಮತಗಟ್ಟೆಗಳ ಅಧಿಕಾರಿಗಳ ಬಳಿ ಲಭ್ಯವಿದ್ದು, ಈ ಅಧಿಕಾರಿಗಳೇ ಮತದಾರ ಬಳಿ ಹೋಗಿ ಮತದಾನ ಮಾಡುವ ಮತಗಟ್ಟೆ ಹಾಗೂ ಸೌಲಭ್ಯಗಳ ಮಾಹಿತಿ ನೀಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಏ.26 ರಂದು ನಡೆಯಲಿದ್ದು, ಮತದಾರರಿಗೆ ಮತಗಟ್ಟೆಗಳ ಮಾಹಿತಿ ನೀಡಲು ಧ್ವಜಾರೋಹಣ ಮೂಲಕ ಇಂದಿನಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ಸಿಂಗಾವಿ ಹೇಳಿದರು.ಧ್ವಜಾರೋಹಣ ಮೂಲಕ ಮತಗಟ್ಟೆಗಳ ಮಾಹಿತಿಗೆ ಚಾಲನೆ:
ಅರುಣ್ ಕುಮಾರ್ ಸಿಂಗಾವಿ ಮಾತನಾಡಿ, ಲೋಕಸಭೆ ಚುನಾವಣೆಗೆ ಪೂರಕವಾಗಿ ಅರಸೀಕೆರೆ ವಿಧಾನ ಸಭೆ ಕ್ಷೇತ್ರದಲ್ಲಿರುವ ಮತಗಟ್ಟೆಗಳ ಪರಿಚಯ ಮತ್ತು ಮತದಾರರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳ ಮಾಹಿತಿಯನ್ನು ಇಂದಿನಿಂದ ಮೂರು ದಿನಗಳವರೆಗೆ ನೀಡಲಿದ್ದೇವೆ. ತಾಲೂಕಿನ ಕೇಂದ್ರ ಸ್ಥಾನದಲ್ಲಿ ನಡೆದಿರುವ ಇಂದಿನ ಧ್ವಜಾರೋಹಣ ಕಾರ್ಯಕ್ರಮವು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಬಂಧಿಸಿದ ಪಿಡಿಒಗಳು ನಡೆಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತೆರಳಿ ಗುರುತಿನ ಚೀಟಿ ನೀಡುವುದರೊಂದಿಗೆ ಮತದಾನ ಮಾಡಲು ಲಭ್ಯವಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿ, ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಈ ಬಾರಿಯ ಲೋಕಸಭಾ ಚುನಾವಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಮತದಾನದ ಯಶಸ್ಸಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಇವರೆಲ್ಲರ ಸಹಕಾರ ಮತ್ತು ಭಾಗವಹಿಸುವಿಕೆಯಿಂದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಿದ್ದೇವೆ ಎಂದರು.
ತಾಪಂ ಇಒ ಸುದರ್ಶನ್ ಮಾತನಾಡಿ, ‘ನಮ್ಮ ನಡೆ ಮತ ಗಟ್ಟೆ ಕಡೆ’ ಎಂಬ ಕಾರ್ಯಕ್ರಮದಡಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರತಿ ಮತಗಟ್ಟೆಗಳ ಮಾಹಿತಿ ಆಯಾ ಮತಗಟ್ಟೆಗಳ ಅಧಿಕಾರಿಗಳ ಬಳಿ ಲಭ್ಯವಿದ್ದು, ಈ ಅಧಿಕಾರಿಗಳೇ ಮತದಾರ ಬಳಿ ಹೋಗಿ ಮತದಾನ ಮಾಡುವ ಮತಗಟ್ಟೆ ಹಾಗೂ ಸೌಲಭ್ಯಗಳ ಮಾಹಿತಿ ನೀಡಲಿದ್ದಾರೆ. ಚುನಾವಣಾ ಆಯೋಗ ನೀಡಿರುವ ಸೂಚನೆಯಂತೆ ಇಂದು ಧ್ವಜಾರೋಹಣ ಮಾಡಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಮತದಾರರ ಮನೆ ಮತ್ತು ಮನ ಮುಟ್ಟುವುದು ಈ ಬಾರಿಯ ಲೋಕಸಭಾ ಚುನಾವಣೆ ಪೂರ್ವ ತಯಾರಿಯ ವಿಶೇಷವಾಗಿದೆ. ಈ ಎಲ್ಲ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿಸಲು ಆಂಧೋಲನ ನಡೆಸಲಾಗುತ್ತಿದೆ ಎಂದರು.ಬಿಇಒ ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತ ಬಸವರಾಜು, ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ , ಶಿರಸ್ತೇದಾರ್ ಗೋಪಾಲಕೃಷ್ಣ , ಶಿವಶಂಕರ್, ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಲತಾ, ನಗರಸಭೆ ಆರೋಗ್ಯ ನಿರೀಕ್ಷಕ ಲಿಂಗರಾಜು, ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದ ಶಶಿಧರ್, ಜ್ಞಾನಶ್ರೀ ಎಕ್ಸ್ ಪರ್ಟ್ ಪಿಯು ಕಾಲೇಜು ಉಪನ್ಯಾಸಕ ಮಂಜುನಾಥ್ ಪಂಡಿತ್ ಇನ್ನಿತರರು ಉಪಸ್ಥಿತರಿದ್ದರು.