ಸಾರಾಂಶ
ಇನ್ಫೋಸಿಸ್ ಆರಂಭ ಆಗುವುದರಿಂದ ಉತ್ತರ ಕರ್ನಾಟಕ ಐಟಿ ಹೆಬ್ಬಾಗಿಲು ಆಗುತ್ತದೆ ಎಂದು ಕೊಂಡಿದ್ದೇವು. ಆದರೆ, ನಮ್ಮ ಭರವಸೆಯನ್ನು ಕಂಪನಿಯವರು ಹುಸಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಹುಬ್ಬಳ್ಳಿ: ನಗರದಲ್ಲಿ ಇನ್ಫೋಸಿಸ್ ಆರಂಭಕ್ಕೆ ನಾವು ಸಾಕಷ್ಟು ಸಹಕಾರ ನೀಡಿದ್ದೆವು. ಆದರೆ, ನಮ್ಮ ಆಸೆ ಆಕಾಂಕ್ಷೆಗಳನ್ನು ಅವರು ಹುಸಿ ಮಾಡಿದ್ದಾರೆ. ಈ ಬಗ್ಗೆ ಸಚಿವರು ಸಹ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಕಾದು ನೋಡೋಣ ಎಂದು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಫೋಸಿಸ್ ಆರಂಭ ಆಗುವುದರಿಂದ ಉತ್ತರ ಕರ್ನಾಟಕ ಐಟಿ ಹೆಬ್ಬಾಗಿಲು ಆಗುತ್ತದೆ ಎಂದರು.ಇಲ್ಲಿ ಓದಿದ ವಿದ್ಯಾರ್ಥಿಗಳು ಈಗ ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ಕ್ಯಾಂಪಸ್ ಆರಂಭ ಆದರೆ ಈ ಭಾಗದ ವಿದ್ಯಾರ್ಥಿಗಳು ಇಲ್ಲಿ ಕೆಲಸ ಮಾಡುತ್ತಾರೆ, ತಂದೆ ತಾಯಿಗಳು ಸಮೀಪ ಇರುತ್ತಾರೆ, ಈ ಭಾಗದಲ್ಲಿ ಐಟಿ ಬಿಟಿ ಕಂಪನಿಯಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ಭರವಸೆಯನ್ನು ಕಂಪನಿಯವರು ಹುಸಿ ಮಾಡಿದ್ದಾರೆ ಎಂದರು.
ಒಂದೇ ಒಂದು ಉದ್ಯೋಗ ಕೂಡ ಸೃಷ್ಟಿ ಮಾಡಿಲ್ಲ. ಅಲ್ಲದೇ 260 ಜನರಿಗೆ ಉದ್ಯೋಗ ಕೊಟ್ಟಿರುವ ಬಗ್ಗೆ ಯಾರೋ ಫೋನ್ ಮಾಡಿ ಹೇಳಿದ್ದರು. ಆದರೆ ನನ್ನ ಗಮನಕ್ಕೆ ಬಂದಿರುವ ರೀತಿ ಯಾವುದೇ ಉದ್ಯೋಗ ಕೊಟ್ಟಿಲ್ಲ. ಇನ್ಫೋಸಿಸ್ದವರು ಯಾವುದರ ಸಂಬಂಧ ಜಾಗ ತೆಗೆದುಕೊಂಡಿದ್ದಾರೆ, ಯಾವ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದ್ದರೋ ಅದು ಆಗಿಲ್ಲ. ಅದರಂತೆ ಉದ್ಯೋಗ ಸೃಷ್ಟಿಸಿ ಈ ಭಾಗದ ನಿರುದ್ಯೋಗ ಹೋಗಲಾಡಿಸುವ ಕಾರ್ಯವನ್ನು ಮಾಡಬೇಕು ಎಂದು ಒತ್ತಾಯಿಸಿದರು.