ಸಾರಾಂಶ
- ಯಾವುದೇ ಸರ್ಕಾರಗಳು ಬಂದರೂ ಬುಡಕಟ್ಟು ಜನರ ಬದುಕು ಹಸನಾಗಿಲ್ಲ: ವಿಪ ಸದಸ್ಯ ಶಾಂತಾರಾಮ್ ಸಿದ್ಧಿ ವಿಷಾದ
- ಬಂಬೂ ಬಜಾರ್‌ನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ 30ನೇ ವಿಶ್ವ ಆದಿವಾಸಿ ದಿನಾಚರಣೆ ಉದ್ಘಾಟನೆ - - -ಕನ್ನಡಪ್ರಭ ವಾರ್ತೆ ದಾವಣಗೆರೆ ಸ್ವಾತಂತ್ರ್ಯಪೂರ್ವದ ಬ್ರಿಟಿಷರ ಆಳ್ವಿಕೆ ಕಾನೂನುಗಳ ಆಧಾರದಲ್ಲೇ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಇಂದಿಗೂ ಮುಂದುವರಿದಿದೆ. ಇದರಿಂದಾಗಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬುಡಕಟ್ಟು ಜನರು, ಆದಿವಾಸಿ ಜನರ ಅಭಿವೃದ್ಧಿ ಆಗುತ್ತಿಲ್ಲ, ಮೂಲಸೌಕರ್ಯಗಳೂ ದಕ್ಕುತ್ತಿಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಶಾಂತಾರಾಮ್ ಸಿದ್ಧಿ ಬೇಸರ ವ್ಯಕ್ತಪಡಿಸಿದರು.
ನಗರದ ಬಂಬೂ ಬಜಾರ್‌ನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಹಾಗೂ ದೇವದುರ್ಗ ತಿಂಥಿಣಿ ಕನಕ ಗುರುಪೀಠದಿಂದ ಹಮ್ಮಿಕೊಂಡಿದ್ದ 30ನೇ ವಿಶ್ವ ಆದಿವಾಸಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಭಾರತ ಬಿಟ್ಟು ತೊಲಗಿ ದಶಕಗಳೇ ಕಳೆದಿವೆ. ಹಲವಾರು ಸರ್ಕಾರಗಳೇ ಆಳಿದರೂ ಇಂದಿಗೂ ದೇಶದಲ್ಲಿ ಬುಡಕಟ್ಟು ಜನರ ಬದುಕು ಹಸನಾಗಿಲ್ಲ ಎಂದರು.ಸರ್ಕಾರದ ದಾಖಲೆಗಳಲ್ಲೇ ಆದಿವಾಸಿ ಎಂಬ ಪದವು ಬಳಕೆಯಾಗುತ್ತಿಲ್ಲ. ಗಿರಿಜನ, ಬುಡಕಟ್ಟು ಎಂಬ ಪದಗಳಷ್ಟೇ ಬಳಕೆ ಆಗುತ್ತಿವೆ. ಸರ್ಕಾರದಿಂದ ಸೌಲಭ್ಯ ಪಡೆಯಲು ಸಾಕಷ್ಟ ತೊಡಕು ಸಹ ಇವೆ. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ವಿಚಾರವಂತೂ ಒಂದೇ ಒಂದು ಹೆಜ್ಜೆ ಸಹ ಮುಂದೆ ಹೋಗಿಲ್ಲ. ಮೂಲ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಇಂದಿಗೂ ನಡೆಯುತ್ತಿದೆ ಎಂದು ದೂರಿದರು.
ಸಾಮಾನ್ಯವಾಗಿ ಆದಿವಾಸಿ ಸಮುದಾಯದಲ್ಲಿ ಒಂದಿಷ್ಟು ಶಿಕ್ಷಣ ಪಡೆದ ತಕ್ಷಣ ಕೆಲವರು ತಮ್ಮ ಮೂಲವನ್ನು ಹೇಳಿಕೊಳ್ಳುವುದಕ್ಕೆ ನಾಚಿಕೆಪಡುತ್ತಾರೆ, ಹಿಂದೇಟು ಹಾಕುತ್ತಾರೆ. ಇದೆಲ್ಲಾ ಸರಿಯಲ್ಲ. ನಾವು ಆದಿವಾಸಿಗಳು ಎಂಬುದಾಗಿ ಸ್ವಾಭಿಮಾನದಿಂದ, ಅಭಿಮಾನದಿಂದ ಹೇಳಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆದಿವಾಸಿಗಳಾದ ನಾವು ನಮ್ಮದೇ ಆದಂತಹ ವಿಶಿಷ್ಟ ಆಚರಣೆ, ಸಂಪ್ರದಾಯಗಳ ಕಾರಣಕ್ಕಾಗಿ ಕುಲಶಾಸ್ತ್ರ ಅಧ್ಯಯನದಿಂದ ನಮ್ಮನ್ನು ಆದಿವಾಸಿಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ನಾವು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕಾಗಿದೆ. ನಮ್ಮ ಸಂಸ್ಕೃತಿ, ಆಚರಣೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಗುರುಗಳು ಮಾರ್ಗದರ್ಶನ ನೀಡಬೇಕು. ಮಹಿಳೆಯರು ಸೇರಿದಂತೆ ಸಮುದಾಯದ ವಿದ್ಯಾರ್ಥಿ, ಯುವಜನರು ಸಹ ಅಭಿಮಾನ ಹೊಂದಬೇಕು. ಬುಡಕಟ್ಟು ಸಮುದಾಯದ ಬಗ್ಗೆ ಸಂಶೋಧನೆ ಕೈಗೊಂಡ ಅನೇಕರು ಪಿಎಚ್.ಡಿ ಪದವಿ ಪಡೆದಿರುವುದು ಶ್ಲಾಘನೀಯ. ಇಂತಹವರ ಅಧ್ಯಯನವು ಮಾನವ ಸಮಾಜಕ್ಕೆ ಬಳಕೆ ಆಗಬೇಕು ಎಂದು ಶಾಂತಾರಾಮ್ ಸಿದ್ಧಿ ಹೇಳಿದರು.
ಸಮಾರಂಭ ಉದ್ಘಾಟಿಸಿದ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಬುಡಕಟ್ಟು ಸಮುದಾಯದವರಾದ ಶಾಂತಾರಾಮ್ ಸಿದ್ಧಿ ಅವರನ್ನು ವಿಧಾನ ಪರಿಷತ್ತು ಸದಸ್ಯರಾಗಿ ನಮ್ಮ ಪಕ್ಷವು ನೇಮಿಸಿದೆ. ಕೇಂದ್ರ ಸರ್ಕಾರವು ಬುಡಕಟ್ಟು ಜನರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆದಿವಾಸಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವಿಕಾಸಕ್ಕೆ ಕ್ರಮ ಕೈಗೊಂಡಿದೆ. ಇದಕ್ಕಾಗಿ ಸುಮಾರು ₹24 ಸಾವಿರ ಕೋಟಿಗಳನ್ನು ಕಾಯ್ದಿರಿಸಿದೆ. ಶಾಲಾ-ಕಾಲೇಜು, ಹಾಸ್ಟೆಲ್ ಹಾಗೂ ವಿದ್ಯಾರ್ಥಿ ವೇತನಕ್ಕೆ ಇಂತಹ ಅನುದಾನ ವಿನಿಯೋಗವಾಗುತ್ತಿದೆ. ಬುಡಕಟ್ಟು ಸಮುದಾಯವು ಶೈಕ್ಷಣಿಕವಾಗಿಯೂ ಅಭಿವೃದ್ಧಿಯಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.ದೇವದುರ್ಗ ತಿಂಥಿಣಿ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಅಧ್ಯಕ್ಷ ಎಂ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಕೆ.ಎಂ.ಮೈತ್ರಿ, ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ, ಉಪಾಧ್ಯಕ್ಷ ನಾಗರಾಜ ಮೇದಾರ ಹಾವೇರಿ, ಭಾಸ್ಕರ ಎಸ್. ಮೇದಾರ, ಎಸ್.ಎಸ್.ರಾಕೇಶ, ಕರಿಬಸಪ್ಪ, ಅಮೃತ ಇತರರು ಇದ್ದರು. ರವಿಕುಮಾರ ಎಂ.ಮೇದಾರ, ಶ್ರೀನಿವಾಸಗೌಡ, ಕುಮುದಾ, ಜಿ.ಸ್ವಾಮಿ ಕಾರ್ಯಕ್ರಮ ನಡೆಸಿಕೊಟ್ಟರು.
ಬುಡಕಟ್ಟು ಸಂಶೋಧನೆ ಸಾಹಿತ್ಯದಲ್ಲಿ ಕೃಷಿ ಮಾಡಿದ 19 ಪಿಎಚ್.ಡಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ವೃತ್ತದಿಂದ ಆದಿವಾಸಿಗಳ ಕಲಾಮೇಳದ ಭವ್ಯ ಮೆರವಣಿಗೆ ಜರುಗಿತು.- - - ಕೋಟ್ಸ್ * ಆದಿವಾಸಿಗಳಿಗೆ ಹಕ್ಕುಗಳ ಕೊಡಿಸಿಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ನಾನಾ ಯೋಜನೆಗಳಿಗಾಗಿ ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವ ಸರ್ಕಾರ ಅಲ್ಲಿಂದ ಪುನರ್ವಸತಿ ಕೇಂದ್ರಗಳಿಗೆ ಕಳಿಸುತ್ತದೆ. ಆದರೆ, ಅರಣ್ಯದಿಂದ ಎತ್ತಂಗಡಿಯಾದ ಜನರ ಭೂಮಿ, ಕುಡಿಯುವ ನೀರಿನ ಸಮಸ್ಯೆಗಳು ಮಾತ್ರ ಇಂದಿಗೂ ಪರಿಹಾರ ಕಂಡಿಲ್ಲ ಎಂದು ವಿಪ ಸದಸ್ಯ ಶಾಂತಾರಾಮ್ ಸಿದ್ಧಿ ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಆದಿವಾಸಿಗಳಿಗಾಗಿ ರೂಪಿಸುವಂತಹ ಯೋಜನೆಗಳು ಯಶಸ್ವಿಯಾಗಿಲ್ಲ. ಜಿಪಂ, ತಾಪಂ ಚುನಾವಣೆಯ ನೆಪದಲ್ಲಿ ಇನ್ನೂ ಅರಣ್ಯ ಸಮಿತಿ ಸಭೆ ನಡೆಸಿ, ಕಾಡಂಚಿನ ಜನರ ಸಮಸ್ಯೆಯನ್ನೇ ಆಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆದಿವಾಸಿಗಳಿಗೆ ಸಿಗಬೇಕಾದ ಹಕ್ಕುಗಳನ್ನು ಕೊಡಿಸುವ ಕೆಲಸವನ್ನು ಆಳುವ ಸರ್ಕಾರಗಳು, ಜನಪ್ರತಿನಿಧಿಗಳು, ಮಠಾಧೀಶರು, ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು. - - -ಟಾಪ್ ಕೋಟ್
ಆದಿವಾಸಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹24 ಸಾವಿರ ಕೋಟಿ ಮೀಸಲಿಟ್ಟಿದ್ದು, ಹರಿಹರ ಕ್ಷೇತ್ರದ ರಾಜಗೊಂಡ ಸಮುದಾಯದ ಆದಿವಾಸಿಗಳಿಗೆ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಿಸಿ, ಆದಷ್ಟು ಬೇಗನೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು- ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ
- - --9ಕೆಡಿವಿಜಿ5:
ದಾವಣಗೆರೆಯಲ್ಲಿ ಶುಕ್ರವಾರ ದೇವದುರ್ಗ ತಿಂಥಿಣಿ ಕನಕ ಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನಿಂದ ನಡೆದ 30ನೇ ವಿಶ್ವ ಆದಿವಾಸಿ ದಿನ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಶಾಂತಾರಾಮ ಸಿದ್ಧಿ, ಶಾಸಕ ಬಿ.ಪಿ.ಹರೀಶ, ಎಂ.ಕೃಷ್ಣಯ್ಯ, ಪಿ.ರಾಜೇಶ, ಡಾ.ಮೈತ್ರಿ ಇತರರು ಪಾಲ್ಗೊಂಡರು.-9ಕೆಡಿವಿಜಿ6, 7, 8, 9:
ದಾವಣಗೆರೆ ನಗರದಲ್ಲಿ ಶುಕ್ರವಾರ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನಿಂದ 30ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಆದಿವಾಸಿಗಳ ಕಲಾ ಮೇಳ ಗಮನ ಸೆಳೆಯಿತು.-9ಕೆಡಿವಿಜಿ10:ದಾವಣಗೆರೆಯಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ದೇವದುರ್ಗ ತಿಂಥಿಣಿ ಕನಕ ಗುರುಪೀಠದಿಂದ ಹಮ್ಮಿಕೊಂಡಿದ್ದ 30ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಸಮಾಜದವರಿಗೆ ಸನ್ಮಾನಿಸಲಾಯಿತು.