ಶಿವಾನಂದ ಮಲ್ಲನಗೌಡ್ರ ಕನ್ನಡಪ್ರಭ ವಾರ್ತೆ ಬ್ಯಾಡಗಿ

ಬ್ಯಾಡಗಿ ಮತಕ್ಷೇತ್ರವು ಒಣಮೆಣಸಿನಕಾಯಿ ಮಾರುಕಟ್ಟೆಯಿಂದಾಗಿ ರಾಜ್ಯದಲ್ಲಿಯೇ ಖ್ಯಾತಿ ಪಡೆದಿದೆ. ವ್ಯಾಪಾರ, ಶಿಕ್ಷಣ, ಕೃಷಿ ಹಾಗೂ ಪುಣ್ಯಕ್ಷೇತ್ರಗಳ ಸಮ್ಮಿಲನವಾಗಿದ್ದು, ಜಿಲ್ಲಾ ಕೇಂದ್ರ ಹಾವೇರಿಗಿಂತಲೂ ಅಭಿವೃದ್ಧಿ ಕಾಮಗಾರಿಗಳ ನಿರೀಕ್ಷೆ ಸಹಜವಾಗಿಯೇ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಆದಾಯದ ದೃಷ್ಟಿಯಿಂದ ಬ್ಯಾಡಗಿಯ ಅಂತಾರಾಷ್ಟ್ರೀಯ ಮೆಣಸಿಕಾಯಿ ಮಾರುಕಟ್ಟೆ ಜಿಲ್ಲೆಯಲ್ಲಿಯೇ ಬಹುದೊಡ್ಡ ವ್ಯಾಪಾರಿ ಕೇಂದ್ರವಾಗಿದೆ. ಸದರಿ ಮಾರುಕಟ್ಟೆಗೆ ಮೂಲಸೌಕರ್ಯ ಸೇರಿದಂತೆ ವರ್ತಕರ ಹಾಗೂ ರೈತರ ಅನುಕೂಲಕ್ಕಾಗಿ ಮುಖ್ಯರಸ್ತೆ ಅಗಲೀಕರಣ, ರಿಂಗ್ ರೋಡ್ (ವರ್ತುಲರಸ್ತೆ) ನಿರ್ಮಾಣ ಅದರಲ್ಲಿ ಪ್ರಮುಖವಾಗಿ ಟೆಸ್ಟಿಂಗ್ ಲ್ಯಾಬ್ (ಮೆಣಸಿನಕಾಯಿ ಪರೀಕ್ಷಾ ಕೇಂದ್ರ), ರೈತರಿಗಾಗಿ ಕೋಲ್ಡ್ ಸ್ಟೋರೇಜಗಳ ನಿರ್ಮಾಣ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಬೇಕಾಗಿದೆ.

ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯ, ದೇವಗಿರಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು, ರಾಣಿಬೆನ್ನೂರ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕಾಲೇಜುಗಳು ಮತಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಹಜವಾಗಿ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರೀಕ್ಷೆಗಳು ಹೆಚ್ಚಾಗಲಿವೆ, ಅದರಲ್ಲೂ ಇನ್ನೇನು ಮುಚ್ಚುವ ಹಂತವನ್ನು ತಲುಪಿದ್ದ ಹಾವೇರಿ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡುವ ಮೂಲಕ ಐಸಿಯುನಿಂದ ಹೊರ ತರಬೇಕಾಗಿದೆ. ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವ ಇಂಜಿನಿಯರಿಂಗ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜುಗಳನ್ನು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗೆ ಕೊಂಡೊಯ್ಯಲು ಬಜೆಟ್‌ನಲ್ಲಿ ಹಣದ ನಿರೀಕ್ಷೆ ಹೊಂದಲಾಗಿದೆ. ಕೃಷಿಕ್ಷೇತ್ರ: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತುಕ್ಕುಹಿಡಿದಿರುವ ಕೆರಿಮತ್ತಿಹಳ್ಳಿಯ ತಳಿ ಸಂಶೋಧನಾ ಕೇಂದ್ರವನ್ನು ಅನುದಾನ ನೀಡುವ ಮೂಲಕ ಚುರುಕುಗೊಳಿಸಬೇಕಾಗಿದೆ. ಯಾರಿಗೂ ಪರಿಚಯವಿಲ್ಲದ ಹನುಮನಮಟ್ಟಿ ಕೃಷಿ ವಿಜ್ಞಾನ ಕಾಲೇಜನ್ನು ಅಭಿವೃದ್ಧಿಪಡಿಸುವ ಮೂಲಕ ರೈತರ ಸಹಕಾರಕ್ಕೆ ನಿಲ್ಲುವಂತೆ ಮಾಡಬೇಕಾಗಿದೆ, ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ಒದಗಿಸಿದರೂ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ 144 ಕೋಟಿ ರು.ಗಳ ವೆಚ್ಚದ ಪೈಪಲೈನ್ ಕಾಮಗಾರಿಗೆ ಅರ್ಧಹಣ ಬಿಡುಗಡೆಯಾಗಿದ್ದು, ಇನ್ನರ್ಧ ಬಿಡುಗಡೆಯಾಗಬೇಕಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಹಾನಗಲ್ಲ ತಾಲೂಕು ಬ್ಯಾತನಾಳದ ಬಳಿಯಿರುವ ಜಾಕವೆಲ್ ಪ್ರದೇಶದಲ್ಲಿ ವರದಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣಕ್ಕೆ ಹಣ ಮೀಸಲಿಡುವ ನಿರೀಕ್ಷೆಯಿದೆ, ಆಣೂರು ಏತ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಅರಬಗೊಂಡ ಬಳಿಯಿರುವ ಹಾವೇಮುಲ್ (ಹಾಲು ಒಕ್ಕೂಟ) ಅಭಿವೃದ್ಧಿಗೆ ಹಣ ಘೋಷಿಸುವ ನಿರೀಕ್ಷೆ ಇದೆ.ಪುಣ್ಯಕ್ಷೇತ್ರಗಳ ಸಮ್ಮಿಲನ: ಜಿಲ್ಲೆಯಲ್ಲಿಯೇ ಅತೀಹೆಚ್ಚು ಪುಣ್ಯಕ್ಷೇತ್ರಗಳನ್ನು ಹೊಂದಿರುವ ಮತ ಕ್ಷೇತ್ರ ಬ್ಯಾಡಗಿ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಂಬಿಗರ ಚೌಡಯ್ಯ ಪ್ರಾಧಿಕಾರಗಳ ರಚನೆ, ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರಿಸರ್ಚ್ ಸೆಂಟರ್ ಅರಂಭ, ಕದರಮಂಡಲಗಿ ಕಾಂತೇಶನ (ಆಂಜನೇಯನ) ಕ್ಷೇತ್ರದಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಅಭಿವೃದ್ಧಿ, ಬರುವ ಭಕ್ತರಿಗಾಗಿ ಸುಸಜ್ಜಿತ ಪ್ರವಾಸಿಮಂದಿರ, ಸ್ವಯಂಚಾಲಿತ ಬೃಹತ್ ಪಾರ್ಕಿಂಗ್ ಸ್ಥಳದ ನಿರ್ಮಾಣಕ್ಕೆ ಅನುದಾನ ಬೇಕಾಗಿದೆ.

ಬ್ಯಾಡಗಿ ಪಟ್ಟಣದಲ್ಲಿ ಮೀಸಲಿಟ್ಟಿರುವ 10 ಎಕರೆ ಜಾಗದಲ್ಲಿ ಮಲ್ಟಿ ಸ್ಪೆಷ್ಟಾಲಿಟಿ ಅಥವಾ ಇಎಸ್ಐ ಆಸ್ಪತ್ರೆ ನಿರ್ಮಾಣ, ತಾಲೂಕು ಕ್ರೀಡಾಂಗಣದಲ್ಲಿ ಅಪೂರ್ಣಗೊಂಡ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪೂರ್ಣ ಸೇರಿದಂತೆ ಸುಸಜ್ಜಿತ ಜಿಮ್ ಹಾಲ್, ಈಜುಗೊಳ ನಿರ್ಮಾಣ, ಬಾಲಕಿಯರ ಕಬಡ್ಡಿ ವಸತಿ ನಿಲಯಕ್ಕೆ ಅನುದಾನ ಬೇಕಾಗಿದೆ, ಬಾಲಕಿಯರಿಗಾಗಿ ಪ್ರತ್ಯೇಕ ಪದವಿ ಪೂರ್ವ ಶಿಕ್ಷಣ ಕಾಲೇಜು (ಪಿಯು ಕಾಲೇಜು), ಮೋಟೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಸರ್ಕಾರಿ ಅಸ್ಪತ್ರೆ ಹಾಗೂ ವಿವಿಐಪಿ ಪ್ರವಾಸಿ ಮಂದಿರ ನಿರ್ಮಾಣ ಬಹು ವರ್ಷಗಳ ಬೇಡಿಕೆಗಳಾಗಿವೆ.


ದೇಶದಲ್ಲಿಯೇ ವಿಶಿಷ್ಟ ಹೆಸರು ಪಡೆದ ಬ್ಯಾಡಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಜಿಲ್ಲೆಯಲ್ಲೇ ಅತೀ ಹೆಚ್ಚು ನಿರೀಕ್ಷೆಗಳಿರುವ ಕ್ಷೇತ್ರ ಇದಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ವಿವಿಧ ಯೋಜನೆಗಳಡಿ ಹೆಚ್ಚು ಅನುದಾನದ ನಿರೀಕ್ಷೆಯಲ್ಲಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಬ್ಯಾತನಾಳದ ಬಳಿಯಿರುವ ಜಾಕವೆಲ್ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಸೇರಿದಂತೆ, ಮೆಣಸಿನಕಾಯಿ ಬೆಳೆಗಾರ ರೈತರಿಗೆ ಕೋಲ್ಡ್ ಸ್ಟೋರೇಜ್ (ನೋಲಾಸ್ ನೋಫ್ರಾಫಿಟ್) ನಿರ್ಮಾಣ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.