ಕ್ಯಾನ್ಸರ್‌ ಪೀಡಿತನ ಶವಸಂಸ್ಕಾರದಲ್ಲಿ ಅಮಾನವೀಯ ವರ್ತನೆ

| Published : Jun 12 2024, 12:39 AM IST

ಸಾರಾಂಶ

ಬನಹಟ್ಟಿಯಲ್ಲಿ ಮಂಗಳವಾರ ಇಡೀ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಮಂಗಳವಾರ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೋವಿಡ್ ಸಂದರ್ಭದಲ್ಲಿ ಶವಸಂಸ್ಕಾರ ನಡೆಸುವಲ್ಲಿ ಅಮಾನವೀಯ ಘಟನೆಗಳನ್ನು ಕಂಡಿದ್ದೇವೆ. ಬನಹಟ್ಟಿಯಲ್ಲಿ ಮಂಗಳವಾರ ಇಡೀ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ.ಹಾಗಾದರೆ ಆಗಿದ್ದೇನು?: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಗುರು ಕಿತ್ತೂರ (೫೧) ಎಂಬಾತ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ. ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದಾಗ ಶಸ್ತ್ರಕ್ರಿಯೆ ಮಾಡಬೇಕು ಎಂದು ತಿಳಿಸಿದ್ದರು. ಇದಕ್ಕೆ ಕುಟುಂಬದವರ ಸಹಕಾರ ದೊರೆಯದ ಕಾರಣ ಚಿಕಿತ್ಸೆ ಸಿಗಲಿಲ್ಲ. ಕಳೆದೆರಡು ತಿಂಗಳಿಂದ ಹೆಂಡತಿ ಕೂಡ ತವರು ಮನೆಗೆ ಹೋಗಿ ನೆಲೆಸಿದ್ದರಿಂದ ಮೃತ ಗುರು ಸಹ ಪತ್ನಿಯ ತವರು ಮನೆಗೆ ಹೋಗಿದ್ದ.

ಆದರೆ, ಮನೆಯಲ್ಲಿ ಒಳಗೆ ಬಿಟ್ಟುಕೊಳ್ಳದ ಕಾರಣ ಅನಾರೋಗ್ಯದ ಮಧ್ಯೆಯೂ ಹೊರಗಡೆಯೇ ರಸ್ತೆ ಪಕ್ಕ ಮಲಗಿ ಅವರಿವರಲ್ಲಿ ಬೇಡಿ ಜೀವನ ಸಾಗಿಸುತ್ತಿದ್ದ. ಆದರೆ, ಸೋಮವಾರ ರಾತ್ರಿ ನಗರದ ವೈಭವ ಚಿತ್ರಮಂದಿರ ಬಳಿ ರಸ್ತೆ ಪಕ್ಕ ಮಲಗಿದಲ್ಲೇ ಮೃತನಾಗಿದ್ದ. ಬೆಳಗ್ಗೆ ಇದನ್ನು ನೋಡಿದ ಓಣಿಯ ಜನ ಶವವನ್ನು ಪತ್ನಿಯ ಮನೆಗೆ ತಂದಿದ್ದು, ಮನೆಯವರು ಮನೆಯೊಳಗೆ ಶವ ಕೂಡ್ರಿಸಬೇಡಿ ನೀವೇ ಏನಾದರೂ ಮಾಡಿಕೊಳ್ಳಿ ಎಂದು ಅಮಾನವೀಯವಾಗಿ ವರ್ತಿಸಿದ್ದಾರೆ. ಮನವರಿಕೆಗೆ ಮಾಡಿದರೂ ಬೀಗರ ಮನೆಯವರು ಕೇಳದ ಕಾರಣ ಅನಿವಾರ್ಯವಾಗಿ ಮನೆ ಮುಂದಿರುವ ವಿದ್ಯುತ್ ಕಂಬಕ್ಕೆ ಮೃತದೇಹ ಕೂಡ್ರಿಸಲಾಯಿತು.

ಮಾನವೀಯತೆ ಮೆರೆದ `ಸಮಸ್ತ ದೈವ’ : ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕುಟುಂಬಸ್ಥರ ಮನವೊಲಿಸಿ ಕೆಲ ಹೊತ್ತಿನ ನಂತರ ಶವವನ್ನು ಮನೆಯಲ್ಲಿ ಕೂಡ್ರಿಸುವ ವ್ಯವಸ್ಥೆ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದರು.