ಸ್ವಾವಲಂಬಿ ಸ್ವಗ್ರಾಮ ನಿರ್ಮಾಣಕ್ಕೆ ಹನುಮನಹಳ್ಳಿ ಯುವಕರಿಗೆ ದೀಕ್ಷೆ

| Published : Mar 14 2025, 12:34 AM IST

ಸಾರಾಂಶ

ಗದಗ ಮಹಾತ್ಮ ಗಾಂಧೀ ಗ್ರಾಮೀಣಭಿವೃದ್ಧಿ ವಿಶ್ವವಿದ್ಯಾಲಯ ಅಡಿಯಲ್ಲಿ ನಡೆಯುವ "ಸ್ವಗ್ರಾಮ ಫೆಲೊಷಿಪ್‌ "ಗೆ ಆಯ್ಕೆಯಾಗಿರುವ ಈ ಹನುಮನಹಳ್ಳಿ ಗ್ರಾಮದ ಆಯ್ದ 15 ಯುವಕರಿಗೆ ಹೆಸರಾಂತ ಗ್ರಾಮೀಣಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್‌ ಎರಡು ದಿನಗಳ ಕಾಲ ಇಲ್ಲಿನ ತಮ್ಮ ಮನೆಯಲ್ಲಿ (ಬಯಲು) ತರಬೇತಿ ಆಯೋಜಿಸಿದ್ದರು.

ಧಾರವಾಡ:

ಅವರು ತಮ್ಮೂರಿನ ಸಮಸ್ಯೆಗಳನ್ನು ತಾವೇ ಪಟ್ಟಿ ಮಾಡಿ, ಅವುಗಳಿಂದ ಊರನ್ನು ಬಿಡುಗಡೆ ಮಾಡುವ ಮಾರ್ಗೋಪಾಯವನ್ನೂ ತಾವೇ ಕಂಡುಕೊಂಡರು. ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸದೇ ಒಗ್ಗಟ್ಟಿನಿಂದ ಶ್ರಮದಾನ ಮಾಡಿ ಸ್ವಾವಲಂಬಿ ಮತ್ತು ಸ್ವಾಭಿಮಾನದ ಊರು ಕಟ್ಟುವ ಶಪತಗೈದರು....

ಇಲ್ಲಿನ ಹೊಯ್ಸಳನಗರದ "ಬಯಲು " ಆಲಯ ಗುರುವಾರ ಕೊಪ್ಪಳ ತಾಲೂಕು ಹನುಮನಹಳ್ಳಿ ಯುವಕ-ಯುವತಿಯರ ಸ್ವಗ್ರಾಮ ಅಭಿವೃದ್ಧಿಯ ಈ ಶಪತಕ್ಕೆ ಸಾಕ್ಷಿಯಾಯಿತು. ಕೇವಲ 20 ತಾಸುಗಳ ಅಲ್ಪ ಅವಧಿಯಲ್ಲಿ ಆ ಯುವಕರ ಎದೆಯಲ್ಲಿ ಇಂಥದೊಂದು ಪರಿವರ್ತನೆ, ಸ್ವಾಭಿಮಾನದ ಜ್ಯೋತಿ ಉಕ್ಕುವಂತೆ ಮಾಡಿತು.

ಗದಗ ಮಹಾತ್ಮ ಗಾಂಧೀ ಗ್ರಾಮೀಣಭಿವೃದ್ಧಿ ವಿಶ್ವವಿದ್ಯಾಲಯ ಅಡಿಯಲ್ಲಿ ನಡೆಯುವ "ಸ್ವಗ್ರಾಮ ಫೆಲೊಷಿಪ್‌ "ಗೆ ಆಯ್ಕೆಯಾಗಿರುವ ಈ ಹನುಮನಹಳ್ಳಿ ಗ್ರಾಮದ ಆಯ್ದ 15 ಯುವಕರಿಗೆ ಹೆಸರಾಂತ ಗ್ರಾಮೀಣಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್‌ ಎರಡು ದಿನಗಳ ಕಾಲ ಇಲ್ಲಿನ ತಮ್ಮ ಮನೆಯಲ್ಲಿ (ಬಯಲು) ತರಬೇತಿ ಆಯೋಜಿಸಿದ್ದರು.

ಸರ್ಕಾರದ ಹೆಚ್ಚಿನ ಅವಲಂಬನೆ ಇಲ್ಲದೆಯೇ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲ ಮತ್ತು ಜನಶಕ್ತಿ ಬಳಸಿಕೊಂಡು ಒಂದು ಮಾದರಿ ಗ್ರಾಮವನ್ನು ಕಟ್ಟುವ ಕುರಿತಂತೆ ಡಾ. ಭಟ್‌ ವಿವಿಧ ಮಾದರಿಗಳನ್ನು ವಿವರಿಸಿದರು.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕತಿಕವಾಗಿ ಊರಿನ ಎಲ್ಲರೂ ಅಭಿವೃದ್ಥಿ ಹೊಂದುವ ಜತೆಗೆ ಆರೋಗ್ಯವಂತ ಸಮುದಾಯ ನಿರ್ಮಿಸಲು ಕೈಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮನವರಿಕೆ ಮಾಡಿದರು. ಎಲ್ಲದಕ್ಕೂ ಹೆಚ್ಚಾಗಿ ಮೌಢ್ಯಗಳನ್ನು ತೊಡೆದು ಹಾಕಿ ವಿವೇಕವಂತರಾಗಲು, ಸೌಹಾರ್ದತೆ ಮತ್ತು ಒಗ್ಗಟ್ಟಿನಿಂದ ಇಂಥದೊಂದು ಸಾಧನೆ ಮಾಡುವ ಇಚ್ಚಾಶಕ್ತಿ ಪ್ರದರ್ಶಿಸುವಂತೆ ತಿಳಿವಳಿಕೆ ನೀಡಿದರು.ಸಮಸ್ಯೆಗಳಿಗೆ ಪರಿಹಾರ:

15 ಜನರನ್ನು 3 ಗುಂಪುಗಳನ್ನಾಗಿ ಮಾಡಿ ಊರಿನ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಪ್ರೇರೇಪಿಸಲಾಯಿತು. ಈ ಮೂರು ಗುಂಪಿನವರು ತಮ್ಮಲ್ಲೇ ಚರ್ಚಿಸಿ, ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಮತ್ತು ಅವುಗಳ ಕಡ್ಡಾಯ ಬಳಕೆ. ಯುವಕ-ಯುವತಿಯರ ಸಂಘಗಳನ್ನು ಮಾಡಿ ಶ್ರಮದಾನದ ಮೂಲಕ ಊರಿನ ಸ್ವಚ್ಛತೆ ಕಾಪಾಡುವುದು. ಗ್ರಾಮದ ಎಲ್ಲ ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳುವುದು. ಅರ್ಧದಲ್ಲೇ ಶಾಲೆ ಬಿಟ್ಟವರನ್ನು ಮರಳಿ ಶಾಲೆಗೆ ಸೇರಿಸುವುದು. ಅಂಗನವಾಡಿ, ಶಾಲೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸದ್ಭಳಕೆ, ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ, ಊರಿನ ತಾಯಮ್ಮ ದೇವಿ ಜಾತ್ರೆಯಲ್ಲಿ ನಡೆಯುತ್ತ ಬಂದಿರುವ ಪ್ರಾಣಿಬಲಿ ಕೈಬಿಟ್ಟು ಅರ್ಥಪೂರ್ಣ ಜಾತ್ರೆ ಆಚರಿಸುವ ಮೂಲಕ ಮೂಢನಂಬಿಕೆಯನ್ನು ಊರಿನಿಂದ ತೊಡೆದು ಹಾಕುವ ನಿರ್ಧಾರ ಸೇರಿದಂತೆ ಹತ್ತು-ಹಲವು ಸಮಸ್ಯೆಗಳಿಗೆ ತಾವೇ ಪರಿಹಾರ ಸೂಚಿಸಿಕೊಂಡರು. ಇದನ್ನೆಲ್ಲ ಸಾಧಿಸುವುದಾಗಿ ಶಪತಗೈದರು.ಊರಿನ ಸೇವೆಯೇ ಪೂಜೆ:

ಬಳಿಕ ಶಿಬಿರಾರ್ಥಿಗಳಿಗೆ ಕಂಕಣ ಕಟ್ಟಿದ ಭಟ್ ದಂಪತಿ "ಊರಿನ ಸೇವೆಯೇ ನಿಜವಾದ ಪೂಜೆ. ಈ ಸೇವೆಯನ್ನೇ ಇಷ್ಟದೇವರಿಗೆ ಸಮರ್ಪಣೆ " ಮಾಡುವ ದೀಕ್ಷೆ ನೀಡಿದರು. ಊರಿನಿಂದ ಬಯಲುಶೌಚ, ಪ್ಲಾಸ್ಟಿಕ್, ಮೂಢನಂಬಿಕೆ ಹೊಡೆದೋಡಿಸುವ ಶಪತ ಮಾಡಿಸಿದರು.

ಸುನಂದಾ ಭಟ್, ಜಿ.ಸಿ. ತಲ್ಲೂರ, ದಿವಾಕರ ಹೆಗಡೆ, ಮಲ್ಲಿಕಾರ್ಜುನ ಸಿದ್ದಣ್ಣವರ, ಮಾಲತಿ ಹೆಗಡೆ, ಡಾ. ಹೇಮಾವತಿ ಹೆಬ್ಬಾರ, ಪುಷ್ಪಾ ಹೆಗಡೆ ಮತ್ತು ಶಿಬಿರಾರ್ಥಿಗಳಾದ ರಾಘವೇಂದ್ರ ಬಡಿಗೇರ, ಮುತ್ತಣ್ಣ ಉಸಲಟ್ಟಿ, ಯಮನೂರಪ್ಪ ಬಗರನಾಳ, ಯಮನೂರಪ್ಪ ರಾಮನಳ್ಳಿ, ಬಡರಪ್ಪ ರಾಮನಳ್ಳಿ, ಯಡಿಯೂರಪ್ಪ ಭೋವಿ, ಪ್ರಿಯಾಂಕಾ ಬೇವೂರ, ಯಮನೂರಪ್ಪ ಕುಟಕನಹಳ್ಳಿ, ಮಲ್ಲಪ್ಪ ಹೊಸಳ್ಳಿ, ಮಂಜುಳಾ ಇಟ್ನಾಳ, ಲಕ್ಷ್ಮವ್ವ ವಾಲಿಕಾರ, ದೇವಮ್ಮ ಮುರುಡಿ, ಹನುಮವ್ವ ಉಸಲಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.