ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) 2025ನೇ ಸಾಲಿನ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ತರ ಸಾಧನೆ ಮಾಡಿದೆ. ಮಾಹೆಯ 8 ಸೀಮಿತ ವಿಷಯಗಳಲ್ಲಿ ಮತ್ತು ಒಂದು ವಿಸ್ತಾರ ವಿಷಯದಲ್ಲಿ ಈ ಸಾಧನೆ ಮಾಡಿದೆ.ವಿಸ್ತಾರ ವಿಷಯದಲ್ಲಿ ಮಾಹೆಯು ಜೀವ ವಿಜ್ಞಾನ ವಿಭಾಗದಲ್ಲಿ ಕಳೆದ ವರ್ಷ 317ನೇ ಸ್ಥಾನದಲ್ಲಿದ್ದು, ಈ ಬಾರಿ 293ನೇ ಸ್ಥಾನ ಪಡೆದು, 24 ಶ್ರೇಯಾಂಕಗಳ ಏರಿಕೆ ಕಂಡಿದೆ.ಸೀಮಿತ ವಿಷಯಗಳಲ್ಲಿ ಮಾಹೆಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗವು 401-450, ಎಕಾನಾಮಿಕ್ಸ್ ಆ್ಯಂಡ್ ಎಕನಾಮೆಟ್ರಿಕ್ಸ್ ವಿಭಾಗವು 551-700, ಫಾರ್ಮಸಿ ಆ್ಯಂಡ್ ಫಾರ್ಮಕಾಲಜಿ ವಿಭಾಗವು 101-150, ರಸಾಯನಶಾಸ್ತ್ರ ವಿಭಾಗವು 501-550, ದಂತ ವೈದ್ಯಕೀಯ ವಿಭಾಗವು 51-120, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫಾರ್ಮೇಷನ್ ಸಿಸ್ಟಮ್ಸ್ ವಿಭಾಗವು 601-650, ಮೆಡಿಸಿನ್ ವಿಭಾಗವು 251-300 ಮತ್ತು ಬಯಾಲಾಜಿಕಲ್ ಸೈನ್ಸಸ್ ವಿಭಾಗವು 501-550ರ ನಡುವಿನ ಶ್ರೇಯಾಂಕಗಳನ್ನು ಗಳಿಸಿವೆ.ಈ ಸಾಧನೆ ಕುರಿತು ಮಾಹೆಯ ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ಈ ಶ್ರೇಯಾಂಕಗಳಿಂದ ಮಾಹೆಯ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯ ಪರಿಚಯವಾಗುತ್ತಿದೆ. ಜಾಗತಿಕ ಮಟ್ಟದ ಈ ಶ್ರೇಯಾಂಕದಲ್ಲಿನ ನಮ್ಮ ಸ್ಥಿರತೆಯು ವಿವಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಮಾನ್ಯತೆಯಿಂದ ನಮ್ಮ ಉತ್ತಮ ಶೈಕ್ಷಣಿಕ ವಾತಾವರಣ, ಸಂಶೋಧನೆ ಮತ್ತು ಸಮಾಜ ಪರಿವರ್ತಿಸುವ ಶಿಕ್ಷಣದ ಬಗ್ಗೆ ನಮ್ಮ ಬದ್ಧತೆಯು ಇನ್ನಷ್ಟು ಬಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.