ಸಾರಾಂಶ
ಬಲ ಮುಂಗಾಲಿಗೆ ಗಾಯವಾಗಿದ್ದರಿಂದ ಮರಿ ಚಿರತೆಯೊಂದು ತಾಯಿಯಿಂದ ಬೇರ್ಪಟ್ಟು ಮರವೇರಿ ಕುಳಿತಿದೆ
ಕನಕಗಿರಿ: ಯಗೊಂಡಿದ್ದ ನಾಲ್ಕೈದು ತಿಂಗಳಿನ ಹೆಣ್ಣು ಚಿರತೆ ಮರಿಯೊಂದು ಪಟ್ಟಣದ ಸಮೂಹ ಕಚೇರಿ ಬಳಿಯ ಜಮೀನಿನೊಂದರಲ್ಲಿ ಭಾನುವಾರ ಬೆಳಗಿನ ಜಾವ ಬೇವಿನಮರ ಏರಿ ಮಲಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಪಟ್ಟಣದಿಂದ ಬಂಕಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ರೈತ ಭುವನೇಶಪ್ಪನ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ತಾಯಿ ಚಿರತೆಯೊಂದಿಗೆ ಚಿರತೆ ಮರಿಗಳು ಬಂದಿವೆ. ಬಲ ಮುಂಗಾಲಿಗೆ ಗಾಯವಾಗಿದ್ದರಿಂದ ಮರಿ ಚಿರತೆಯೊಂದು ತಾಯಿಯಿಂದ ಬೇರ್ಪಟ್ಟು ಮರವೇರಿ ಕುಳಿತಿದೆ. ಭುವನೇಶಪ್ಪ ಹಾಗೂ ಮಗ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಬೇವಿನಮರ ಏರಿ ಮಲಗಿದ್ದ ಚಿರತೆ ಮರಿಯನ್ನು ಬೆಕ್ಕು ಎಂದು ಭಾವಿಸಿ ಓಡಿಸಲು ಮುಂದಾಗಿದ್ದಾರೆ. ಗಾಯಗೊಂಡಿದ್ದ ಚಿರತೆ ಮರಿ ಗರ್ಜಿಸಿದಾಗ ಚಿರತೆ ಎಂದು ತಿಳಿದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯ ಅಧಿಕಾರಿ ಎಂ.ಡಿ. ಸುಲೇಮಾನ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.ಚಿಕಿತ್ಸೆಗಾಗಿ ಚಿರತೆ ಮರಿಯನ್ನು ಗಂಗಾವತಿಗೆ ರವಾನೆ ಮಾಡಿದ್ದು, ಗುಣಮುಖವಾದ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯವರು ತಿಳಿಸಿದರು.
ಸಿಬ್ಬಂದಿ ಶಿವರೆಡ್ಡಿ, ಈರಪ್ಪ ಹಾದಿಮನಿ ಇತರರಿದ್ದರು.ತಾಯಿಯ ಜತೆ ಎರಡು ಮರಿ ನೋಡಿದ್ದೇನೆ. ತಾಯಿ ಮತ್ತು ಇನ್ನೊಂದು ಮರಿ ಚಿರತೆ ಬೇವಿನಮರದ ಕೆಳಗೆ ಇದ್ದವು. ನಾವು ಅಲ್ಲಿಗೆ ಹೋಗುತ್ತಿದ್ದಂತೆ ಅವರೆಡು ಓಡಿ ಹೋದವು. ಗಾಯಗೊಂಡಿದ್ದ ಚಿರತೆ ಮರವೇರಿ ಕುಳಿತುಕೊಂಡಿತ್ತು. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದೆವು ಎಂದು ಪ್ರತ್ಯಕ್ಷದರ್ಶಿ ಬಸವರಾಜ ತಿಳಿಸಿದ್ದಾರೆ.
ಕನಕಗಿರಿ ಬಳಿ ಗಾಯಗೊಂಡಿರುವ ಚಿರತೆ ಮರಿಯನ್ನು ರಕ್ಷಿಸಲಾಗಿದೆ. ದೊಡ್ಡ ಪ್ರಮಾಣದ ಗಾಯವಾಗಿಲ್ಲ. ನೈಸರ್ಗಿಕವಾಗಿ ಚಿಕಿತ್ಸೆ ನೀಡಿ ಗುಣಮುಖವಾದ ಬಳಿಕ ಅರಣ್ಯಕ್ಕೆ ಬಿಡಲಾಗುವುದು. ಚಿರತೆ ಮರಿ ಆರೋಗ್ಯಯುತವಾಗಿದೆ ಎಂದು ಆರ್‌ಎಫ್ಒ ಚೈತ್ರಾ ಮೆಣಸಿನಕಾಯಿ ತಿಳಿಸಿದ್ದಾರೆ.