ಎಂಸಿಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ನೀಡದೆ ಅನ್ಯಾಯ

| Published : Jul 17 2024, 12:52 AM IST

ಎಂಸಿಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ನೀಡದೆ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ರೈತರಿಂದ ಸಾಲ ಮರು ಪಾವತಿಸಿಕೊಂಡು ಮತ್ತೇ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡದೇ ಹಾಗೂ ಸಂಘದ ಠೇವಣಿಯನ್ನು ನೀಡದೆ ಕಳೆದ ಏಳು ತಿಂಗಳಿಂದ ಸತಾಯಿಸುತ್ತಿದ್ದ ಬ್ಯಾಂಕ್ ಅಧಿಕಾರ ಧೋರಣೆಯನ್ನು ಖಂಡಿಸಿ, ಸಿಬ್ಬಂದಿಯನ್ನು ಕೂಡಿ ಹಾಕಿ ಬ್ಯಾಂಕ್‌ಗೆ ಬೀಗ ಜಡಿದು ಕೆರೆಹಳ್ಳಿ ಭಾಗದ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ರೈತರಿಂದ ಸಾಲ ಮರು ಪಾವತಿಸಿಕೊಂಡು ಮತ್ತೇ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡದೇ ಹಾಗೂ ಸಂಘದ ಠೇವಣಿಯನ್ನು ನೀಡದೆ ಕಳೆದ ಏಳು ತಿಂಗಳಿಂದ ಸತಾಯಿಸುತ್ತಿದ್ದ ಬ್ಯಾಂಕ್ ಅಧಿಕಾರ ಧೋರಣೆಯನ್ನು ಖಂಡಿಸಿ, ಸಿಬ್ಬಂದಿಯನ್ನು ಕೂಡಿ ಹಾಕಿ ಬ್ಯಾಂಕ್‌ಗೆ ಬೀಗ ಜಡಿದು ಕೆರೆಹಳ್ಳಿ ಭಾಗದ ರೈತರು ಪ್ರತಿಭಟನೆ ನಡೆಸಿದರು. ನಗರದ ನಂಜನಗೂಡು ಸರ್ಕಲ್‌ನಲ್ಲಿರುವ ಎಂಸಿಡಿಸಿಸಿ ಬ್ಯಾಂಕ್‌ಗೆ ಕೆರೆಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ನೇತೃತ್ವದಲ್ಲಿ ರೈತರು ಬ್ಯಾಂಕಿನ ಬಾಗಿಲು ಹಾಕಿ ಸಾಲ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಿ ನಂತರ ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿದರು.ಬೆಳಗ್ಗೆಯಿಂದ ಸಂಘದ ಅಧ್ಯಕ್ಷ ನವೀನ್, ಸಿಇಒ ರಾಜೇಂದ್ರ ಹಾಗೂ ಸಾಲ ಪಡೆದುಕೊಳ್ಳಲು ಬಂದಿದ್ದ ರೈತರು ಸಾಯಂಕಾಲದವರೆಗೆ ಕಾದು ಬಸವಳಿದರು. ಬ್ಯಾಂಕಿನ ಮ್ಯಾನೇಜರ್ ಹಾಗೂ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ವಿನೋದ್ ಕುಮಾರ್ ಅವರು ಸತಾಯಿಸಿದರು. ಸಂಜೆ ಆದರು ಸಾಲದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡದ ಅಧಿಕಾರಿಗಳ ಧೋರಣೆ ವಿರೋಧಿಸಿ, ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ ನಾಲ್ಕು ಗಂಟೆಯ ಅವಧಿಯಲ್ಲಿ ಬೀಗ ಜಡಿದರು. ಕಾಂಪೌಂಡ್ ಹಾರಿದ ಪ್ರಧಾನ ವ್ಯವಸ್ಥಾಪಕ: ಇತ್ತ ರೈತರು ಬ್ಯಾಂಕಿಗೆ ಬೀಗ ಹಾಕಲು ಮುಂದಾಗಿ ಗೇಟ್ ಮುಚ್ಚಿ ಬಾಗಿಲು ಬಂದ್ ಮಾಡುತ್ತಿದ್ದಂತೆ, ಮೈಸೂರಿನಿಂದ ಬಂದಿದ್ದ ಪ್ರಧಾನ ವ್ಯವಸ್ಥಾಪಕ ವಿನೋದ ಕುಮಾರ್ ರೈತರ ಸಮಸ್ಯೆಯನ್ನು ಆಲಿಸದೆ ಕಾಂಪೌಂಡ್ ಹಾರಿ ಪರಾರಿಯಾದರು. ನಂತರ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ, ಬ್ಯಾಂಕಿನ ಬೀಗ ತೆಗೆಸಲು ಹರ ಸಾಹಸ ಮಾಡಿದರು. ಆದರೆ ಇದ್ಯಾವುದಕ್ಕು ಮಣಿಯದ ರೈತರು ನಮಗೆ ಲಿಖಿತವಾಗಿ ಪತ್ರ ಕೊಟ್ಟರೆ ಮಾತ್ರ ಬಾಗಿಲು ತೆರೆಯುವುದಾಗಿ ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಾಕ್ಕಾಗಮಿಸಿದ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಇತರೇ ಅಧಿಕಾರಿಗಳು ರೈತರು ಹಾಗೂ ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ೧೦ ದಿನಗಳ ಕಾಲವಕಾಶವನ್ನು ನೀಡಿ, ಈ ಗಡುವಿನೊಳಗೆ ರೈತರ ಖಾತೆಗೆ ಹಣ ಜಮಾ ಮಾಡುವಂತೆ ಸೂಚನೆ ನೀಡಿದರು.

ಪ್ರತಿಭಟನಾಕಾರರಿಗೆ ಲಿಖಿತ ಪತ್ರವನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿನೋದ್ ಕುಮಾರ್, ಡಿಜಿಎಂ ನಾಗರಾಜು ನೀಡಿದರು. ರೈತರು ಪ್ರತಿಭಟನೆಯನ್ನು ಕೈ ಬಿಟ್ಟು ಬೀಗ ತೆಗೆದು ಸಿಬ್ಬಂದಿಯನ್ನು ಬಂಧನದಿಂದ ಮುಕ್ತಿ ಗೊಳಿಸಿದರು. ಪ್ರತಿಭಟನೆಯಲ್ಲಿ ಸಂಘದ ಸಿಇಒ ರಾಜೇಂದ್ರ, ನಿರ್ದೇಶಕರಾದ ರಾಜಕುಮಾರ್, ಕೆಂಪರಾಜು, ರೇವಣ್ಣ, ರೈತರಾದ ಜಯಮ್ಮ, ಮಹೇಶ್, ಚಂದ್ರಯ್ಯ, ಮುತ್ತಿಗೆ ದೊರೆ, ಮಧು, ಬಸುಮರಿ, ಸೇರಿದಂತೆ ರೈತರು ಇದ್ದರು.