ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗಗಳ ಸಮಾಜಕ್ಕೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳಿಂದ ರಾಜಕೀಯವಾಗಿ ದೊಡ್ಡಮಟ್ಟದ ಅನ್ಯಾಯವಾಗಿದೆ ಎಂದು ಕರ್ನಾಟಕ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ ವಿನಯ್ ಕುಮಾರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗಗಳ ಸಮಾಜಕ್ಕೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳಿಂದ ರಾಜಕೀಯವಾಗಿ ದೊಡ್ಡಮಟ್ಟದ ಅನ್ಯಾಯವಾಗಿದೆ ಎಂದು ಕರ್ನಾಟಕ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಜಿ.ಬಿ ವಿನಯ್ ಕುಮಾರ್ ಆರೋಪಿಸಿದರು.

ಯಾದಗಿರಿ ನಗರದ ತಾಲೂಕು ಕುರುಬ ಸಂಘದ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಚಿಂತನಾ ಮಂಥನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಹಿಂದುಳಿದ ಸಮುದಾಯ ಜನ ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಹಿಂದುಳಿದಿದ್ದು, ಇದಕ್ಕೆ ಪ್ರಮುಖ ಕಾರಣ ಎಲ್ಲಾ ರಾಜಕಾರಣಿಗಳು ನಮ್ಮನ್ನು ವೋಟ್ ಬ್ಯಾಂಕಗಳನ್ನಾಗಿ ಮಾತ್ರ ಬಳಸಿಕೊಳ್ಳುತ್ತಿರುವುದು. ಹಿಂದುಳಿದ ಸಮಾಜಗಳನ್ನು ರಾಜಕೀಯವಾಗಿ ಮುಂದೆ ತರುವಲ್ಲಿ ಮಾತ್ರ ರಾಜಕಾರಣಿಗಳು ಪ್ರಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಶ್ರಮಿಸಿಬೇಕು. ಜತೆಗೆ ಎಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಬೇಕು. ಹಾಗಾದಾಗ ಮಾತ್ರ ನಾವು ಕೂಡಾ ರಾಜಕೀಯವಾಗಿ ಬೆಳೆಯಲು ಸಾಧ್ಯ. ಹಿಂದುಳಿದ ವರ್ಗಗಳ ಮತಗಳಿಂದ ಗೆದ್ದ ಅದೆಷ್ಟೋ ಶಾಸಕರು ಹಿಂದುಳಿದ ಸಮಾಜವನ್ನೇ ಕಡೆಗಣಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು,

ಯುವಕರು ಸಮಾಜದ ಸಂಘಟನೆಗೆ ಶ್ರಮಿಸಬೇಕು. ನಾನು ಹಿಂದುಳಿದ ವರ್ಗಗಳ ಸಮಾಜದ ಜಾಗೃತಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಹಿಂದುಳಿದ ಸಮಾಜದೊಂದಿಗೆ ಸದಾಕಾಲ ಇರುತ್ತೇನೆ ಎಂದು ಭರವಸೆ ನೀಡಿದರು.

ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಪ್ರಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗಗಳ ಸಮಾಜದ ಮುಖಂಡರುಗಳಾದ ವಿಶ್ವನಾಥ್ ನೀಲಹಳ್ಳಿ, ಕಾಳಪ್ಪ ಕವತಿ, ಕೆ.ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಕೆ, ಹೊನ್ನಪ್ಪ ಮುಸ್ಟೂರ, ಹಣಮಂತ್ರಾಯ ಗೌಡ ಪೊ.ಪಾಟೀಲ್, ಸೂರ್ಯಕಾಂತ ಅಲಿಪುರ, ಸಾಹಿತಿ ಶ್ರೀಶೈಲ್ ಪೂಜಾರಿ, ನರಸಪ್ಪ ಕವಡಿ, ಹೊನ್ನೇಶ್ ಬಳಿಚಕ್ರ, ಯಂಕಪ್ಪ ಬಂಗ್ಲಿ, ಮೊಹಮ್ಮದ್ ಜಾವಿದ, ದೇವೇಂದ್ರಪ್ಪ ಕುಂಬಾರ್, ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ಕುರುಬ ಸಂಘ ಜಿಲ್ಲಾಧ್ಯಕ್ಷ ಶಿವಕುಮಾರ್ ಮುನಗಲ್ನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು