ವಿದ್ಯುತ್ ಲೈನ್ ಹೆಸರಲ್ಲಿ ರೈತರಿಗೆ ಅನ್ಯಾಯ: ಪದ್ಮಪ್ರಸಾದ್ ಜೈನ್

| Published : Nov 20 2025, 01:30 AM IST

ವಿದ್ಯುತ್ ಲೈನ್ ಹೆಸರಲ್ಲಿ ರೈತರಿಗೆ ಅನ್ಯಾಯ: ಪದ್ಮಪ್ರಸಾದ್ ಜೈನ್
Share this Article
  • FB
  • TW
  • Linkdin
  • Email

ಸಾರಾಂಶ

ರೈತರನ್ನು ನಿರ್ಲಕ್ಷಿಸಿ ಸಿಇಎ ವಿದ್ಯುತ್ ಕಾಯ್ದೆಯನ್ನು ಉಲ್ಲಂಘಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಎರಡು ಜಿಲ್ಲೆಗಳಲ್ಲಿ 27 ಗ್ರಾಮಗಳಲ್ಲಿ ವಿದ್ಯುತ್ ಲೈನ್ ಹಾದು ಹೋಗಬೇಕಿತ್ತು. ಆದರೆ ಸರ್ಕಾರದ ಗೆಜೆಟ್ ಪತ್ರದಲ್ಲಿ 150 ಗ್ರಾಮಗಳ ಹೆಸರನ್ನು ಸೇರಿಸಲಾಗಿದೆ. ಇದೇ ಅಧಿಸೂಚನೆಯನ್ನು ಬಳಸಿಕೊಂಡು ಭವಿಷ್ಯದಲ್ಲಿ ಹೊಸಬೆಟ್ಟು ಮತ್ತು ಇರುವೈಲು ಗ್ರಾಮಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಆತಂಕವಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಉಡುಪಿ-ಕಾಸರಗೋಡು 400 ಕೆ‌‌.ವಿ. ವಿದ್ಯುತ್ ಲೈನ್ ಯೋಜನೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಸ್ಟೆರ್ ಲೈಟ್ ಕಂಪನಿಗೆ ಲಾಭಮಾಡಿ ಕರಾವಳಿ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರನ್ನು ನಿರ್ಲಕ್ಷಿಸಿ ಸಿಇಎ ವಿದ್ಯುತ್ ಕಾಯ್ದೆಯನ್ನು ಉಲ್ಲಂಘಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಎರಡು ಜಿಲ್ಲೆಗಳಲ್ಲಿ 27 ಗ್ರಾಮಗಳಲ್ಲಿ ವಿದ್ಯುತ್ ಲೈನ್ ಹಾದು ಹೋಗಬೇಕಿತ್ತು. ಆದರೆ ಸರ್ಕಾರದ ಗೆಜೆಟ್ ಪತ್ರದಲ್ಲಿ 150 ಗ್ರಾಮಗಳ ಹೆಸರನ್ನು ಸೇರಿಸಲಾಗಿದೆ. ಇದೇ ಅಧಿಸೂಚನೆಯನ್ನು ಬಳಸಿಕೊಂಡು ಭವಿಷ್ಯದಲ್ಲಿ ಹೊಸಬೆಟ್ಟು ಮತ್ತು ಇರುವೈಲು ಗ್ರಾಮಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಆತಂಕವಿದೆ ಎಂದರು.ರೈತರು ಈ ಯೋಜನೆಯನ್ನು ತೀವ್ರವಾಗಿ ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರ್ಕಾರವು ಅದನ್ನು ಗಣನೆಗೆ ತೆಗೆದುಕೊಳ್ಳದೆ ಇಲಾಖೆಗೆ ಒತ್ತಡ ಹೇರುತ್ತಿದೆ. ಪ್ರಧಾನ ಮಂತ್ರಿ ಕಚೇರಿಯಿಂದ ತಿಂಗಳಿಗೆರಡು ಬಾರಿ ಸಹಾಯಕ ಆಯುಕ್ತರಿಗೆ ಕರೆಮಾಡಿ ಯೋಜನಾ ಪ್ರಗತಿಯ ವಿವರ ಪಡೆಯುತ್ತಿದೆ. ರೈತರ ನೋವಿಗೆ ಸ್ಪಂದಿಸುತ್ತಿಲ್ಲ, ರೈತರಿಗೆ ನೀಡುವ ಪರಿಹಾರದಲ್ಲೂ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.ಈ ಯೋಜನೆಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿದ್ದರೂ ಭಾರತೀಯ ಕಿಸಾನ್ ಸಂಘವು ರಾಜ್ಯ ಸರ್ಕಾರವನ್ನು ಬೊಟ್ಟು ಮಾಡಿ ಪ್ರತಿಭಟನೆ ಮಾಡಿ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದೆ. ರೈತರ ಪರ ರಾಜಕೀಯ ಬಿಟ್ಟು ಎಲ್ಲ ಪಕ್ಷದವರು ಕೂಡ ಕೈಜೋಡಿಸಬೇಕು ಎಂದರು.ವಕೀಲರಾದ ಮರ್ವಿನ್ ಲೋಬೋ, ಕೃಷಿಕರಾದ ಲಿಯೋ ವಾಲ್ಟರ್ ನಝರೆತ್, ಟಿ.ಎನ್.ಕೆಂಬಾರೆ, ರಾಜೇಶ್ ಡಿಕೋಸ್ತ ಹಾಗೂ ಜೀವನ್ ಕ್ರಾಸ್ತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.