ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ಗೌಡಗೆರೆ ಹೋಬಳಿಗೆ ನೀರಾವರಿ ವಿಷಯದಲ್ಲಿ ಅನ್ಯಾಯವಾಗಿದ್ದು, ಈ ಅನ್ಯಾಯವನ್ನು ಸರಿಪಡಿಸುವಂತೆ ಹಕ್ಕೋತ್ತಾಯ ಮಂಡಿಸಲು ಗೌಡಗೆರೆ ಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಿವೃತ್ತ ಪಶುವೈದ್ಯಾಧಿಕಾರಿ ಡಾ. ಗೌ.ಮು.ನಾಗರಾಜು ತಿಳಿಸಿದರು. ತಾಲೂಕಿನ ತಾವರಕೆರೆ ಗಣೇಶನ ದೇವಸ್ಥಾನದ ಆವರಣದಲ್ಲಿ ಗೌಡಗೆರೆ ಹೋಬಳಿಯ ರೈತರು, ಸಾರ್ವಜನಿಕರ ಸಭೆ ನಡೆಸಿ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿ ನಂತರ ಮಾತನಾಡಿದರು. ಗೌಡಗೆರೆ ಹೋಬಳಿಯ ಬಹುತೇಕ ಗ್ರಾಮಗಳ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆಯಡಿ ಅವಕಾಶವಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ತಾಲೂಕಿನ ಇತರೆ ಭಾಗಗಳ ಕೆರೆಗಳಿಗೆ ಹೇಮಾವತಿ, ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಗಳಡಿ ನೀರು ಹರಿಸಲು ನೀಲಿನಕ್ಷೆ ರೂಪಿಸಲಾಗಿದೆ. ಸದಾ ಬರದಿಂದ ತತ್ತರಿಸಿರುವ ಗೌಡಗೆರೆ ಹೋಬಳಿಯ ಭೂತಕಾಟನಹಳ್ಳಿ, ಮದ್ದಕ್ಕನಹಳ್ಳಿ, ಮೊಸರಕುಂಟೆ, ಪುರಲೇಹಳ್ಳಿ, ಗೌಡಗೆರೆ, ಹೊನ್ನೇನಹಳ್ಳಿ, ಬಾಲೇನಹಳ್ಳಿ, ಜೆ.ಹೊಸಹಳ್ಳಿ, ಕಳುವರಹಳ್ಳಿ, ಮೆಳೆಕೋಟೆ, ಬಂದಕುಂಟೆ ಮತ್ತು ಇತರೆ ಕೆರೆಗಳಿಗೆ ನೀರು ಹರಿಸಲು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ಸರಕಾರದ ಮೇಲೆ ನಿರಂತರ ಒತ್ತಡ ಹೇರಲು ಗೌಡಗೆರೆ ಹೋಬಳಿಯ ನೀರಾವರಿ ಹಕ್ಕೋತ್ತಾಯ ಸಮಿತಿ ರಚಿಸಿದ್ದೇವೆ ಎಂದರು. ಮಾಜಿ ಎಪಿಎಂಸಿ ಅಧ್ಯಕ್ಷ ಎಂ.ಆರ್.ಶಶಿಧರ ಗೌಡ ಮಾತನಾಡಿ, ಗೌಡಗೆರೆ ಹೋಬಳಿಗೆ ನೀರು ಹರಿಸುವ ಸಂಬಂಧ ಅ. ೬ರಂದು ತಾವರೆಕೆರೆಯಿಂದ ಶಿರಾ ನಗರದಲ್ಲಿರುವ ಮಿನಿ ವಿಧಾನಸೌಧಕ್ಕೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ಗೌಡಗೆರೆ ಹೋಬಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸಲು ಮನವಿ ಮಾಡಿದರು.ಸಭೆಯಲ್ಲಿ ಮುಖಂಡರಾದ ಹುಣಸೇಹಳ್ಳಿ ಶಶಿಧರ್, ಮುದ್ದೇವಹಳ್ಳಿ ರಾಮಕೃಷ್ಣಪ್ಪ, ಚಂಗಾವರ ಮಾರಣ್ಣ, ಚಂಗಾವರ ಶಿವು, ಮೆಳೆಕೋಟೆ ಉದಯ್ ಶಂಕರ್, ಟಿ.ಸಿ.ಶಿವಕುಮಾರ್ ನಾಯಕ, ಟಿ.ಬಿ. ಶಿವುಸ್ನೇಹಪ್ರಿಯ, ಶಾಂತಮ್ಮ, ವನಜಾಕ್ಷಿ, ಜೆ.ಹೊಸಹಳ್ಳಿ ತಿಪ್ಪೇಸ್ವಾಮಿ, ಮೊಸರಕುಂಟೆ ರಾಜಣ್ಣ, ಟಿ.ಎಚ್. ಲಕ್ಷ್ಮಿಕಾಂತ್, ಉಜ್ಜನಕುಂಟೆ ಯಶೋಧರ, ಎಂ.ಟಿ.ರಂಗನಾಥ್, ಎಂ.ಬಿ.ಶಿವಣ್ಣ, ಹೆರೂರು ಲಕ್ಷ್ಮೀ ರಾಜು, ಸುದರ್ಶನ್ ಯಾದವ್, ಗೋಮಾರದಳ್ಳಿ ಪುಟ್ಟಸ್ವಾಮಿ, ರಂಗನಹಳ್ಳಿ ಸದಾನಂದ ಗೌಡ, ಮನೋಹರ್ ನಾಯಕ್ ಮತ್ತು ಗೌಡಪ್ಪ ಸುತ್ತಮುತ್ತಲಿನ ರೈತಮುಖಂಡರು ಪಾಲ್ಗೊಂಡಿದ್ದರು.