ಪೊಲೀಸ್ ಬಡ್ತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ

| Published : Jul 04 2025, 11:46 PM IST

ಸಾರಾಂಶ

371ಜೆ ಸ್ಥಾನಮಾನ 2013ರಲ್ಲಿ ಜಾರಿಯಾದರೂ ಪೊಲೀಸ್ ಇಲಾಖೆಯಲ್ಲಿ ಇದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈಗಲೂ ಸರ್ಕಾರ ಕಳೆದೊಂದು ತಿಂಗಳಿಂದ ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ಬಡ್ತಿಯಲ್ಲಿ 371ಜೆ ಸ್ಥಾನಮಾನದ ಅಡಿ ಬಡ್ತಿ ನೀಡುತ್ತಿಲ್ಲ. 2016ರಲ್ಲೂ ಸಹ ಬಡ್ತಿ ನೀಡುವ ವೇಳೆ ಅನ್ಯಾಯವಾದಾಗ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ, ಪಿಎಸ್‌ಐ ಸೇರಿದಂತೆ ಅನೇಕರಿಗೆ ಬಡ್ತಿ ನೀಡುತ್ತಿದೆಯಾದರೂ ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 371ಜೆ ಸ್ಥಾನಮಾನದಡಿ ನೀಡಬೇಕಾದ ಮೀಸಲಾತಿ ನೀಡದೆ ಅನ್ಯಾಯ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

371ಜೆ ಸ್ಥಾನಮಾನ 2013ರಲ್ಲಿ ಜಾರಿಯಾದರೂ ಪೊಲೀಸ್ ಇಲಾಖೆಯಲ್ಲಿ ಇದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈಗಲೂ ಸರ್ಕಾರ ಕಳೆದೊಂದು ತಿಂಗಳಿಂದ ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ಬಡ್ತಿಯಲ್ಲಿ 371ಜೆ ಸ್ಥಾನಮಾನದ ಅಡಿ ಬಡ್ತಿ ನೀಡುತ್ತಿಲ್ಲ. 2016ರಲ್ಲೂ ಸಹ ಬಡ್ತಿ ನೀಡುವ ವೇಳೆ ಅನ್ಯಾಯವಾದಾಗ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಅಂದು ನ್ಯಾಯಾಲಯ ಕಲ್ಯಾಣ ಕರ್ನಾಟಕದವರಿಗೆ ಬಡ್ತಿ ನೀಡುವಂತೆ ಸೂಚಿಸಿದರೂ 38 ಸ್ಥಾನ ಲಭ್ಯವಿದ್ದರೂ 28 ಎಂದು ತೋರಿಸಿ ಅನ್ಯಾಯ ಮಾಡಲಾಯಿತು. ಪ್ರಶ್ನಿಸಿದಾಗ ಸರಿಪಡಿಸಲಾಗುವುದು ಎಂದು ಸರ್ಕಾರ ಕೈ ಚೆಲ್ಲಿತ್ತು.

ಬಡ್ತಿ ನೀಡುವಲ್ಲಿ ಮಾತ್ರ ಕಲ್ಯಾಣ ಕರ್ನಾಟಕದವರಿಗೆ ಅನ್ಯಾಯವಾಗಿಲ್ಲ. ನೇಮಕಾತಿಯಲ್ಲೂ ಆಗಿದೆ ಎಂದು ಹೆಸರೇಳದ ಪೊಲೀಸ್‌ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಬಹುತೇಕ ಇಲಾಖೆಯಲ್ಲಿ 2013ರಿಂದಲೇ 371 ಜೆ ಸ್ಥಾನಮಾನದ ಅಡಿ ಬಡ್ತಿ ನೀಡುತ್ತಿದ್ದರೂ ಸಹ ಪೊಲೀಸ್ ಇಲಾಖೆಯಲ್ಲಿ 2016ರ ನಂತರ ಪರಿಗಣಿಸಲಾಗಿದೆ. ಅದು ನ್ಯಾಯಾಲಯದ ಆದೇಶದ ಮೇರೆಗೆ. ಈಗ ಪುನಃ 371 ಜೆ ಸ್ಥಾನಮಾನ ಪರಿಗಣಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಕುರಿತು ಡಿವೈಎಸ್ಪಿ, ಪಿಐ, ಪಿಎಸ್‌ಐ ಸೇರಿದಂತೆ ಅನೇಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದಾಗ ರಾಜ್ಯದವರನ್ನು ಪ್ರಶ್ನಿಸಿ ಎಂದು ಹೇಳಿದ್ದಾರೆ. ಬಳಿಕ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿಯಾದಾಗ, ಅನ್ಯಾಯ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕಲ್ಯಾಣ ಕರ್ನಾಟಕ ಭಾಗದ ಪೊಲೀಸರ ಬಡ್ತಿಯಲ್ಲಿಯೂ 371ಜೆ ಸ್ಥಾನ ಹೊಂದಿದವರಿಗೆ ಅನ್ಯಾಯವಾಗುತ್ತಿದೆ. ಇಲ್ಲಿ ಕಲ್ಯಾಣ ಕರ್ನಾಟಕದವರು (80%) ಹಾಗೂ ಕಲ್ಯಾಣ ಕರ್ನಾಟಕವಲ್ಲದವರು (20%) ಎಂದು ಮೀಸಲಾತಿ ಪದವನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಹೀಗಾಗಿ ಶೇ. 20ರಲ್ಲಿ ಬಡ್ತಿಯಲ್ಲಿ ಎಲ್ಲರನ್ನು ಪರಿಗಣಿಸಬೇಕು. ಆದರೆ, ಕಲ್ಯಾಣ ಕರ್ನಾಟಕದವರನ್ನು ಮಾತ್ರ ಪರಿಗಣಿಸುತ್ತಿರುವುದರಿಂದ ಹೊರಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಬಡ್ತಿ ಹೊಂದುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ.371ಜೆ ಸ್ಥಾನಮಾನದ ಅಡಿಯಲ್ಲಿ ನೇಮಕಾತಿ ಮತ್ತು ಬಡ್ತಿಯಲ್ಲಿ ಈಗಲೂ ಅನ್ಯಾಯವಾಗುತ್ತಲೇ ಇದೆ. ಪೊಲೀಸ್ ಇಲಾಖೆಯಲ್ಲಿಯೂ ಈ ಸಮಸ್ಯೆ ಇದ್ದು, ಸರ್ಕಾರ ಈ ಕುರಿತು ಪರಿಶೀಲಿಸಿ ಕ್ರಮವಹಿಸಬೇಕು ಎಂದು 371ಜೆ ಹೋರಾಟ ಸಮಿತಿ ಅಧ್ಯಕ್ಷ ರಮೇಶ ತುಪ್ಪದ ಹೇಳಿದರು.