ಸಾರಾಂಶ
ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸರಣಿ ಮುಂದುವರಿದಿದ್ದು, ಗುರುವಾರ ಒಂದೇ ದಿನ 7 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸರಣಿ ಮುಂದುವರಿದಿದ್ದು, ಗುರುವಾರ ಒಂದೇ ದಿನ 7 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಮೂರು ಪ್ರಕರಣಗಳು ವರದಿಯಾಗಿವೆ. ಹಾಸನ ನಗರದ ಕರಿಗೌಡ ಕಾಲನಿಯ ನಿವಾಸಿ 53 ವರ್ಷದ ಸಂಪತ್ ಕುಮಾರ್, ಸಕಲೇಶಪುರ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ.ವಿರೂಪಾಕ್ಷ (70), ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ದೇವಮ್ಮ (72) ಹೃಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ 29 ವರ್ಷದ ಯುವಕ ಹರೀಶ್ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ತೆಂಗಿನಕಾಯಿ ವ್ಯಾಪಾರದ ಜತೆಗೆ ತೋಟವನ್ನು ನೋಡಿಕೊಳ್ಳುತ್ತಿದ್ದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಕೂಲಿ ಕಾರ್ಮಿಕ ಗೋಕುಲಶೆಟ್ಟಿ (48) ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ದಾವಣಗೆರೆ ತಾಲೂಕಿನ ಐಗೂರು ಗೊಲ್ಲರಹಟ್ಟಿ ಗ್ರಾಮದ 44 ವರ್ಷದ ಅನಾಮಧೇಯ ವ್ಯಕ್ತಿಯೊಬ್ಬರು ಗುರುವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಇದೇ ವೇಳೆ, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಹೃದಯಾಘಾತದಿಂದ ರೈತ, ಸಂತೋಷ್ ಇಂಡಿ (36) ಎಂಬುವರು ಮೃತಪಟ್ಟಿದ್ದಾರೆ.