ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ಸರ್ಕಾರದ ನಿಯಮನುಸಾರ ಇಲ್ಲಿನ ಸ್ಥಳೀಯ ಸೋಲಾರ್ ಕಂಪನಿಗಳಲ್ಲಿ ಜಮೀನು ನೀಡಿದ ರೈತರಿಗೆ ಸೆಕ್ಯೂರಿಟಿ ಕೆಲಸ ನೀಡಬೇಕು. ಕೇಳಿದರೆ ಕಂಪನಿ ಅಧಿಕಾರಿಗಳ ಕುಮ್ಮಕ್ಕಿನ ಮೇರೆಗೆ ಸ್ಥಳೀಯ ಪೊಲೀಸರು ಕಾರ್ಮಿಕ ಮೇಲೆ ದೌರ್ಜನ್ಯವೆಸಗಿ ಕೇಸು ದಾಖಲಿಸುತ್ತಿದ್ದು, ಇದರಿಂದ ಜಮೀನು ನೀಡಿದ ರೈತ ಕಾರ್ಮಿಕರು ವಿಷ ಕುಡಿದು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಜೆಡಿಎಸ್ ಘಟಕ ಸಂಘಟನಾ ಕಾರ್ಯದರ್ಶಿ ಹಾಗೂ ರೈತ ಕಾರ್ಮಿಕರ ಮುಖಂಡ ವಿ.ಸಿ.ಚನ್ನಕೇಶವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಂಗಳವಾರ ಸೋಲಾರ್ ಪ್ರಾಂತ್ಯ ಎಂದೇ ಖ್ಯಾತಿಯಾದ ತಾಲೂಕಿನ ಇಂಟೂರಾಯನಹಳ್ಳಿ ತೋಟದ ಮನೆಯಲ್ಲಿ ರೈತ ಕಾರ್ಮಿಕ ಮುಖಂಡರಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿಯಾಗಿ, ಪುಟ್ಟಣ್ಣಯ ನೇತೃತ್ವದ ರಾಜ್ಯ ರೈತ ಸಂಘ ಹಾಗೂ ರೈತ ಹಾಗೂ ಜನಪರ ಹೋರಾಟಗಳಲ್ಲಿ ನಿರತರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ರೈತ ಹಾಗೂ ಕೃಷಿ ಕಾರ್ಮಿಕರ ಪರ ನನ್ನ ಹೋರಾಟ ನಿರಂತರವಾಗಿದ್ದು ಈ ಭಾಗದಲ್ಲಿ ಸೋಲಾರ್‌ಗೆ ಜಮೀನು ನೀಡಿದ ರೈತರ ತಲಾ ಕುಟುಂಬದಲ್ಲೊಬ್ಬರಿಗೆ ಸೋಲಾರ್ ಕಂಪನಿಗಳಲ್ಲಿ ಕೆಲಸ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ ಇಲ್ಲಿನ ವಳ್ಳೂರು, ಇಂಟೂರಾಯನಹಳ್ಳಿ ಗ್ರಾಮದ ಇರ್ಕಾನ್ ಮತ್ತು ಅಯನಾ ಸೋಲಾರ್ ಕಂಪನಿಗಳು ಸೌರಶಕ್ತಿ ಘಟಕಗಳಿಗೆ ಜಮೀನು ನೀಡಿದ ರೈತರಿಗೆ ಕೆಲಸ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ನ್ಯಾಯಸಮ್ಮತವಾಗಿ ಕೆಲಸ ನೀಡಿ ಎಂದು ಕೇಳಿಕೊಂಡರೆ ಕಂಪನಿ ಅಧಿಕಾರಿಗಳು ಸ್ಥಳೀಯ ತಿರುಮಣಿ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಕೆಲಸ ಕೇಳಿದ ಕೆಲ ಕಾರ್ಮಿಕರ ಮೇಲೆ ಕೇಸ್ ದಾಖಲಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ತಿರುಮಣಿ ಹಾಗೂ ವಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ರೈತರಿಂದ ಗುತ್ತಿಗೆ ಪಡೆದಿದ್ದ 13ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಘಟಕಗಳು ಕಾರ್ಯಾರಂಭದಲ್ಲಿವೆ. ಇನ್ನೂ 10ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ವಿಸ್ತಾರವಾಗುತ್ತಿದೆ. ಈಗಾಗಲೇ ಲೀಸ್ ಅಗ್ರಿಮೆಂಟ್ ಮೂಲಕ ಜಮೀನು ವಶಕ್ಕೆ ಪಡೆದ ಇರ್ಕಾನ್ ಮತ್ತು ಅಯಾನ ಸೋಲಾರ್ ಕಂಪನಿಗಳು ಸೌರಶಕ್ತಿ ಘಟಕಗಳಿಗೆ ಜಮೀನು ನೀಡಿದ ರೈತರಿಗೆ ಕಂಪನಿಗಳಲ್ಲಿ ಸೆಕ್ಯೂರಿಟಿ ಕೆಲಸ ನೀಡಲು ನಕಾರ ಮಾಡುತ್ತಿರುವುದಾಗಿ ಅರೋಪಿಸಿದರು.
ಇರ್ಕಾನ್ ಹಾಗೂ ಅಯನಾ ಸೋಲಾರ್ ಕಂಪನಿಗಳು ವಳ್ಳೂರು ಗ್ರಾಮದ ಸರ್ವೆ ನಂಬರ್‌ಗಳಲ್ಲಿ 1800 ಎಕರೆಯಲ್ಲಿ ವಾರ್ಷಿಕ 25ಸಾವಿರ ರುಗಳಂತೆ ರೈತರ ಜಮೀನುಗಳನ್ನು ಗುತ್ತಿಗೆ ಪಡೆದಿದ್ದು 28ವರ್ಷಕ್ಕೆ ಬದಲಾಗಿ ಹತ್ತು ವರ್ಷ ಹೆಚ್ಚುವರಿಯಾಗಿ ಲೀಸ್ ದಾಖಲೆ ಸೃಷ್ಟಿಸಿ ಅಮಾಯಕ ರೈತರಿಗೆ ವಂಚಿಸುವಲ್ಲಿ ನಿರತರಾಗಿದ್ದಾರೆ. ಈ ಹಿಂದೆ ರೈತರು ಜಮೀನಿನಲ್ಲಿ ಓಡಾಟಕ್ಕೆ ನಕಾಶೆ ಅನ್ವಯ ಬಂಡಿ ಜಾಡುಗಳಿದ್ದು ರೈತರಿಂದ ಜಮೀನು ಪಡೆದಿದ್ದ ಕಂಪನಿ ಅಧಿಕಾರಿಗಳು 6 ಮೀಟರ್ ರಸ್ತೆ ಬದಲಿಗೆ ನಾಲ್ಕು ಮೀಟರ್ ರಸ್ತೆ ಬಿಡುತ್ತೇವೆ ಎನ್ನುತ್ತಿದ್ದಾರೆ. ಕಂಪನಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ದೂರಿದ್ದಾರೆ.ಸರ್ಕಾರ ಮದ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ಇರ್ಕಾನ್ ಹಾಗೂ ಅಯನಾ ಕಂಪನಿಗಳ ವಿರುದ್ಧ ತಾ,ಜೆಡಿಎಸ್ ಘಟಕ ಹಾಗೂ ರೈತ ಇತರೆ ಪ್ರಗತಿ ಪರ ಸಂಘಟನೆಗಳಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ರೈತ ಮುಖಂಡ ಮುತ್ಯಾಲಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ರೈತರ ಪ್ರಗತಿಗೆ ಸರ್ಕಾರ ತಲಾ ಎರಡು ಎಕರೆಯಂತೆ ಈ ಭಾಗದ 6ಮಂದಿ ಫಲಾನುಭವಿಗಳಿಗೆ 12ಜಮೀನು ನೀಡಿದೆ. ವಿಪರ್ಯಾಸವೆಂದರೆ 18ವರ್ಷಗಳ ಕಾಲ ಪರಭಾರೆ ಮಾಡದಂತೆ ಸರ್ಕಾರದ ಆದೇಶವಿದೆ. ಆದರೂ ಫಲಾನುಭವಿಗಳನ್ನು ಯಾಮರಿಸಿ ಇದೇ ಸೋಲಾರ್ ಕಂಪನಿ ಅಧಿಕಾರಿಗಳು ಶಾಶ್ವತವಾಗಿ ಎಸ್‌ಸಿ ಎಸ್‌ಟಿ ಜಮೀನು ವಶಕ್ಕೆ ಪಡೆದು ಅನ್ಯಾಯವೆಸಗಿದ್ದಾರೆ. ಈ ಜಮೀನು ಬಡ ರೈತರಿಗೆ ಬಿಡಿಸಿಕೊಡುವಂತೆ ಒತ್ತಾಯಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ರೈತರಿಗೆ ಆದ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು ಈ ವೇಳೆ ರೈತ ಮುಖಂಡರಾದ ರಾಜಶೇಖರರೆಡ್ಡಿ, ಸೊಂಟರೆಡ್ಡಿ ನಾರಾಯಣರೆಡ್ಡಿ, ಗೋವಿಂದರೆಡ್ಡಿ, ವಿ.ಎಸ್.ಶ್ರೀನಿವಾಸರೆಡ್ಡಿ, ನಟರಾಜ್, ಗಜೇಂದ್ರ, ನಾಗೇಂದ್ರ, ಮಧು ರಾಮಾಂಜಿನಪ್ಪ, ನಾರಾಯಣಪ್ಪ ಇತರರಿದ್ದರು.