ಸಾರಾಂಶ
ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವ ವಿರೋಧಿಸಿ ಬಂಜಾರ (ಲಂಬಾಣಿ), ಕೊರಮ, ಕೊರಚ, ಭೋವಿ (ವಡ್ಡರ) ಭಜಂತ್ರಿ ಸೇರಿದಂತೆ ನೂರಾರು ಜನರು ಬುಧವಾರ ತಹಸೀಲ್ದಾರ್ ಕಚೇರಿ ಎದುರು ಘೋಷಣೆ ಕೂಗುತ್ತ ತಹಸೀಲ್ದಾರ್ ವಾಸುದೇವ ಸ್ವಾಮಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಬಂಜಾರ ಸಮಾಜದ ಮುಖಂಡ ಅಶೋಕ ಲಮಾಣಿ, ರವಿ ಲಮಾಣಿ ಮಾತನಾಡಿ, ಅಸಮರ್ಥನೀಯ ಹಾಗೂ ದತ್ತಾಂಶಗಳನ್ನು ಆಧರಿಸಿದ ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಕಾನೂನು ಮತ್ತು ಸಂವಿಧಾನಿಕ ಸಿಂಧುತ್ವದ ಕೊರತೆ ಎಂದು ಪರಿಗಣಿಸಿ ಸರ್ಕಾರ ಹೊಸ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿನ ವಿವಿಧ ಸಮುದಾಯಗಳ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸದೇ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು. ಪರಿಶಿಷ್ಟ ಜಾತಿಗಳಲ್ಲಿ ಲಂಬಾಣಿ, ಕೊರಚ, ಕೊರಮ, ಭೋವಿ, ವಡ್ಡರ ಸೇರಿದಂತೆ 101 ಜಾತಿಗಳಿದ್ದು, ಕೇವಲ ಎರಡು ಜಾತಿಗಳಿಗೆ ಒಳಮೀಸಲಾತಿ ನೀಡುವುದರಿಂದ ಉಳಿದ 99 ಜಾತಿಗಳಿಗೆ ಅನ್ಯಾಯವಾಗುತ್ತದೆ.
ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶ ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೋಲೆಯಾಗಿದೆ. ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ,ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಹೊರಟಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.2011ರ ನಂತರ ಯಾವುದೇ ಹೊಸ ಜನಗಣತಿ ಆಗಿಲ್ಲವಾದ್ದರಿಂದ ಅದರ ಸ್ಥಿತಿಗತಿಯ ಬಗ್ಗೆ ಈ ಡಾಟಾ ಸಂಗ್ರಹ ಆಗಬೇಕು. ಒಳಮೀಸಲಾತಿ ಜಾರಿಗೆ ಮಾಡದೇ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪರಿಶಿಷ್ಟ ಜಾತಿಯಲ್ಲಿನ ಅವಕಾಶ ವಂಚಿತ, ಶೋಷಿತ ಒಳ ಸಮುದಾಯಗಳನ್ನು ಮರು ವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಮೀಸಲಾತಿಯ ಆಶಯವಾದ ಸಾಮಾಜಿಕ, ಶೈಕ್ಷಣಿಕ ಮೂಲ ಮಾನದಂಡ ಕಡೆಗಣಿಸಿ ಕೇವಲ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದಿರುವಿಕೆ ಗುರುತಿಸಲಾಗುತ್ತಿದೆ ಎಂದು ದೂರಿದರು. ನಂತರ ತಹಸೀಲ್ದಾರ್ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು.ಈ ವೇಳೆ ಕರ್ನಾಟಕ ಸಂತ ಸೇವಾಲಾಲ್ ಸಂಘದ ತಾಲೂಕಾಧ್ಯಕ್ಷ ಪರಮೇಶ ಲಮಾಣಿ, ಭೋವಿ ಸಮಾಜದ ತಾಲೂಕಾಧ್ಯಕ್ಷ ರಾಜಣ್ಣ ಕಳ್ಳಿ, ರಮೇಶ ಲಮಾಣಿ, ರವಿ ಲಮಾಣಿ, ಲಕ್ಷ್ಮಣ ಲಮಾಣಿ, ಸಂತೋಷ ರಾಠೋಡ, ತಿಪ್ಪಣ್ಣ ಲಮಾಣಿ, ಬಸವರಾಜ ಲಮಾಣಿ, ರುದ್ರಪ್ಪ ಲಮಾಣಿ, ಯಲ್ಲಪ್ಪ ವಡ್ಡರ, ಫಕ್ಕೀರಪ್ಪ ದೊಡ್ಡಮನಿ, ದುರ್ಗಣ್ಣ ವಡ್ಡರ, ಮಹೇಶ ಲಮಾಣಿ, ಮುತ್ತು ಲಮಾಣಿ, ಕಿರಣ ಲಮಾಣಿ, ಸುರೇಶ ಲಮಾಣಿ, ಮಹೇಶ ರಾಠೋಡ, ವಿನೋದ ಲಮಾಣಿ, ಕೃಷ್ಣ ಲಮಾಣಿ ಇದ್ದರು.
;Resize=(128,128))
;Resize=(128,128))